Advertisement

ಸಮ್ಮಿಶ್ರ ಸಂಶಯ: ಸಿದ್ದರಾಮಯ್ಯ ಕಡೆಯಿಂದ 2ನೇ ಬಾಂಬ್‌ ಸ್ಫೋಟ

06:00 AM Jun 27, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಹೇಳಿಕೆ ನಡುವೆಯೇ, ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ
ಸರ್ಕಾರದ ಭವಿಷ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಧರ್ಮಸ್ಥಳದ ಶಾಂತಿವನದಲ್ಲಿನ ಪ್ರಕೃತಿ ಚಿಕಿತ್ಸಾದಲ್ಲಿರುವ ಸಿದ್ದರಾಮಯ್ಯ ಅವರು, ವ್ಯಕ್ತಿಯೊಬ್ಬರ ಜತೆ ಮಾತನಾಡುತ್ತಿರುವ ಎರಡನೇ ವಿಡಿಯೋ ಬಿಡುಗಡೆಯಾಗಿದ್ದು, ರಾಜಕೀಯ ವಲಯದಲ್ಲಿ ತೀರ್ವ ಚರ್ಚೆಗೂ ಗ್ರಾಸವಾಗಿದೆ. ಈ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, “”ನಾನು ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಈ ಸರ್ಕಾರ ಐದು ವರ್ಷ ಇದ್ದೇ ಇರುತ್ತೆ” ಎಂದು ಹೇಳುವ ಮೂಲಕ ನೇರವಾಗಿ ಸಿದ್ದರಾಮಯ್ಯ ಅವರಿಗೆ ಎದಿರೇಟು ನೀಡಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಭವಿಷ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಮಾತನಾಡುತ್ತಿದ್ದಾರೆ. ಇದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಉಂಟಾಗುತ್ತಿದ್ದು, ಆಡಳಿತ ಸುಗಮವಾಗಿ ಮುಂದುವರಿಸುವುದು ಕಷ್ಟವಾಗುತ್ತದೆ ಎಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಗಮನಕ್ಕೆ ತರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಸಿದ್ದು ವಿರುದ್ಧ ಎಚ್ಡಿಕೆ ದೂರು?
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದಟಛಿ ಅಸಮಾಧಾನಗೊಂಡಿ ರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಈ ಬಗ್ಗೆ ಕಾಂಗ್ರೆಸ್‌ ವರಿಷ್ಠರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸರ್ಕಾರದೊಳಗೆ ಯಾವುದೇ ಭಿನ್ನಮತ ಇಲ್ಲ. ಸಿದ್ದರಾಮಯ್ಯ ಅವರೊಂದಿಗೆ ಸಚಿವ ಸ್ಥಾನ ವಂಚಿತ ಕೆಲವು ಶಾಸಕರೂ ಸೇರಿಕೊಂಡಿದ್ದು, ಅವರಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸರ್ಕಾರ ಸುಗಮವಾಗಿ ಸಾಗುವುದು ಕಷ್ಟ ಎಂಬುದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಅರಿವಿಗೆ ತರಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಸರ್ಕಾರದ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಈ ಸರ್ಕಾರ ಐದು ವರ್ಷ ಇರುತ್ತೆ. ನೀವು ಪ್ರಶ್ನೆಯನ್ನುಎಷ್ಟೇ ತಿರುವುಮುರುವಾಗಿ ಕೇಳಿದರೂ ನನ್ನಿಂದ ಬರುವುದು ಇದೇ ಉತ್ತರ.
● ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ/ಉಪಮುಖ್ಯಮಂತ್ರಿ

ಸಿದ್ದು ಸಂಭಾಷಣೆ
ವ್ಯಕ್ತಿ: ನನ್ನ ಲೆಕ್ಕದಲ್ಲಿ ಐದು ವರ್ಷ ಇರಲ್ಲಾ ಸಾರ್‌.
ಸಿದ್ದರಾಮಯ್ಯ: ಐದು ವರ್ಷ?
ವ್ಯಕ್ತಿ: ಕಷ್ಟ.
ಸಿದ್ದರಾಮಯ್ಯ: ನೋಡೋಣ, ಪಾರ್ಲಿಮೆಂಟ್‌ ಎಲೆಕ್ಷನ್‌ ಆದ್‌ ಮೇಲೆ ಏನಾಗುತ್ತದೆ ಅಂತಾ. ಪಾರ್ಲಿಮೆಂಟ್‌ ಎಲೆಕ್ಷನ್‌ವರೆಗೂ ಇರುತ್ತಾರೆ, ಆಮೇಲೆ ಏನೇನ್‌ ಡೆವೆಲಪ್‌ಮೆಂಟ್‌ ಆಗುತ್ತೋ..
ವ್ಯಕ್ತಿ: ಬಟ್‌ ಮೋದಿಗೆ ಅಷ್ಟು ಸೀಟು ಬರಲಿಕ್ಕಿಲ್ಲಾ ಸಾರ್‌ ?
ಸಿದ್ದರಾಮಯ್ಯ: ಹಾಂ…. ಮೋದಿಗೆ ಈ ಬಾರಿ ಅಷ್ಟು ಸೀಟು ಬರಲ್ಲಾ. ಅಪೋಜಿಶನ್‌ನವರು ಎಲ್ಲರೂ ಒಂದಾಗಿ ಬಿಟ್ಟರೆ, ಮೋದಿ ತಿಪ್ಪರಲಾಗ ಹಾಕಿದ್ರು ಬರಲ್ಲ.
ವ್ಯಕ್ತಿ: ಬೈ ಎಲೆಕ್ಷನ್‌ನಲ್ಲೂ ಬಿಜೆಪಿ ಅಷ್ಟೇನೂ ಇಲ್ಲಾ ಸರ್‌
ಸಿದ್ದರಾಮಯ್ಯ: ಹೌದು ಎಲ್ಲಾ ಕಡೆನೂ..
ವ್ಯಕ್ತಿ: ಇವಿಎಂದ್ದು ನಿಜಾನಾ ಸಾರ್‌ ?
ಸಿದ್ದರಾಮಯ್ಯ: ಬಹಳ ಜನ ಹೇಳ್ತಾರೆ..
ವ್ಯಕ್ತಿ:ಇದರಲ್ಲಿ ಮಂಗಳೂರು ನಾರ್ಥ್ ಅಲ್ಲೆಲ್ಲಾ ಅಷ್ಟು ಲೀಡ್‌ ಬರಲು ಚಾನ್ಸೇ ಇಲ್ಲ ಅಂತ ಹೇಳ್ತಿದ್ದಾರೆ
ಸಿದ್ದರಾಮಯ್ಯ: ಮುಸ್ಲಿಮರು ಹೆಚ್ಚಿರುವ ಕಡೆಯಲ್ಲೆಲ್ಲಾ ಬಿಜೆಪಿಗೆ ಹೆಂಗೆ ಓಟು ಹೋಗ್ತದೆ ?
ವ್ಯಕ್ತಿ: ಹೌದು ನಾವೂ ಅದೇ ಹೇಳ್ತಿರೋದು. ಎಲ್ಲೋ ಒಂದೆರಡು ಸಾವಿರ ಓಟಲ್ಲಿ ಗೆಲ್ಲಬಹುದಾಗಿತ್ತು. ಅಂಥಾ ಕಡೆಯೆಲ್ಲಾc 15 ಸಾವಿರ ಲೀಡ್‌ ಹೇಗ್‌ ಬರೋಕ್‌ ಸಾಧ್ಯ?
ವ್ಯಕ್ತಿ2: ನಾವು ಅದನ್ನು ಎಕ್ಸ್‌ಪೆಕ್ಟ್ ಮಾಡಿರಲಿಲ್ಲಾ ಸರ್‌. ಮೊಯಿದೀನ್‌ ಬಾವಾ ಇದ್ದರಲ್ಲಾ
ಸಿದ್ದರಾಮಯ್ಯ: ಹಾಂ…
ವ್ಯಕ್ತಿ2: ಮೊಯಿದೀನ್‌ ಬಾವಾ, ರಮಾನಾಥ ರೈ, ಎಲ್ಲಾ ಸೋಲಕ್ಕೆ ಚಾನ್ಸೇ ಇಲ್ಲಾ ಸರ್‌. ಅಷ್ಟು ಡೆವಲಪ್‌ಮೆಂಟ್‌
ಸಿದ್ದರಾಮಯ್ಯ: ಅಷ್ಟೊಂದು ಡೆವಲಪ್‌ಮೆಂಟ್‌ ಮಾಡಿದ್ದಾರೆ ಪಾಪ. ಇಲ್ಲಿ 60 ರಿಂದ 80 ಸಾವಿರ ಬಿಲ್ಲವರಿದ್ದಾರಂತೆ ಅವರೇ ಓಟ್‌ ಹಾಕಿಲ್ಲ.
ವ್ಯಕ್ತಿ2: ಯೂಥ್‌ ಬಿಲ್ಲವರು ಬಿಜೆಪಿ ಲೀಡರ್‌ ಆಗಿದ್ದಾರೆ. ಶೇ. 50 ರಿಂದ 70 ರಷ್ಟು ಯುವಕರಿದ್ದಾರೆ.
ಸಿದ್ದರಾಮಯ್ಯ: ಯಂಗ್‌ಸ್ಟರ್ಸ್‌ (ಸಂಭಾಷಣೆ ಅಂತ್ಯ)

Advertisement

 

Advertisement

Udayavani is now on Telegram. Click here to join our channel and stay updated with the latest news.

Next