Advertisement

ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಹೆಸರು ಬಿಡುವಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು

01:29 PM Aug 14, 2022 | Team Udayavani |

ಬೆಂಗಳೂರು: “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು, ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ?”. ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತು.

Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ನೀಡಿದ ಜಾಹೀರಾತಿನಲ್ಲಿ ನೆಹರೂ ಚಿತ್ರ ಹಾಕದ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೊಮ್ಮಾಯಿಯವರೇ, ಪಂಡಿತ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ ಒಂಬತ್ತು ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ. ಆರ್ ಎಸ್ಎಸ್ ಕೋಮು ರಾಜಕಾರಣವನ್ನು ವಿರೋಧಿಸಿದ್ದ, ಗಾಂಧಿ ಹತ್ಯೆಯ ನಂತರ ಅದನ್ನು ನಿಷೇಧಿಸಿದ್ದ ಮತ್ತು ತನ್ನ ಬದುಕನ್ನು ಜಾತ್ಯತೀತತೆ ಕಾಪಾಡಲು ಮುಡಿಪಾಗಿಟ್ಟಿದ್ದ ಜವಾಹರಲಾಲ್ ನೆಹರೂ ಅವರ ಬಗ್ಗೆ ಆರ್ ಎಸ್ಎಸ್ ಅಲರ್ಜಿಯನ್ನು ಅರ್ಥ ಮಾಡಿಕೊಳ್ಳಬಹುದು, ನಿಮಗೇನಾಗಿದೆ ಬೊಮ್ಮಾಯಿ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನಮೂದಿಸಲು ನಿಮಗೆ ಸಿಕ್ಕ ಏಕೈಕ ವ್ಯಕ್ತಿ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕ್ಷಮೆ ಯಾಚಿಸಿದ್ದ ಹೇಡಿ ವಿ.ಡಿ.ಸಾವರ್ಕರ್ ಮಾತ್ರ ಎನ್ನುವುದು ನಿಮ್ಮ ಪರಿವಾರದ ಸ್ವಾತಂತ್ರ್ಯ ಹೋರಾಟದ ಸತ್ಯವನ್ನು ಬೆತ್ತಲೆ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ (1921 ಮತ್ತು 1931) ಜೈಲುಶಿಕ್ಷೆ ಅನುಭವಿಸಿದ್ದ ಆರ್ ಎಸ್ ಎಸ್ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಚಿತ್ರವನ್ನು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ  ಬೊಮ್ಮಾಯಿ  ಅವರೇ? ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ ಎಂದು ಕೇಳಿದ್ದಾರೆ.

Advertisement

ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ.ಡಿ.ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ, ಸ್ವಾತಂತ್ರ್ಯ ಹೋರಾಟದ ಜೊತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ.  ‘ಸುಪ್ತ ಅಸ್ಪೃಶ್ಯತೆಯ ನಗ್ನ ಪ್ರದರ್ಶನ’. ಬೊಮ್ಮಾಯಿ ಅವರೇ, ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next