ಮೈಸೂರು: ಬಿಜೆಪಿ ಈಗ ಬಿ.ಎಲ್ ಸಂತೋಷ ಕಪಿ ಮುಷ್ಟಿಯಲ್ಲಿ ಸಿಲುಕಿದೆ. ಈಶ್ವರಪ್ಪನಿಗೆ ಬಾಯಿ ಸರಿ ಇರಲಿಲ್ಲ. ಅವನಿಗೆ ಸರಿಯಾದ ಶಾಸ್ತಿ ಮಾಡಿದ್ದು ಸರಿ. ಆದರೆ ಜಗದೀಶ್ ಶೆಟ್ಟರ್, ಸವದಿ, ರಾಮದಾಸ್ ಅವರ ಏನು ತಪ್ಪು ಮಾಡಿದ್ದರು. ಅವರ ಮೇಲೆ ಯಾವ ಆರೋಪಗಳು ಇಲ್ಲ. ಆದರೂ ಟಿಕೆಟ್ ತಪ್ಪಿಸಲಾಗಿದೆ. ಬಿಜೆಪಿ ಈ ಎಲ್ಲಾ ಬೆಳವಣಿಗೆ ಬಿ. ಎಲ್ ಸಂತೋಷ ಕಾರಣ. ಶೆಟ್ಟರ್ ಬಿ.ಎಲ್ ಸಂತೋಷ ಮೇಲೆ ಮಾಡಿರುವ ಆರೋಪಗಳು ಸರಿಯಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣನನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಸೋಮಣ್ಣ ಸ್ಪರ್ಧೆಗೆ ಬಿ.ಎಲ್.ಸಂತೋಷ ಒತ್ತಡವೇ ಕಾರಣ. ದುಡ್ಡಿರುವ ಒಬ್ಬನು ಬೇಕು ಎಂದು ಇಲ್ಲಿಗೆ ತಂದು ಹಾಕಲಾಗಿದೆ ಎಂದರು.
ಸೋಮಣ್ಣ ಹೊರ ಜಿಲ್ಲೆಯವನು. ಸೋಮಣ್ಣನಿಗೆ ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ. ರಾಮನಗರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ರಾಜಕೀಯ ಮಾಡಿದವನು ಸೋಮಣ್ಣ. ಸೋಮಣ್ಣಗು ವರುಣಗೂ ಏನು ಸಂಬಂಧ? ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವರುಣಗೆ ಒಂದೇ ಒಂದು ಮನೆ ಕೊಟ್ಟಿದ್ದನಾ? ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾನೆ. ನನ್ನ ಮತ್ತು ವರುಣ ಸಂಬಂಧವನ್ನು ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಗ್ಗೆ ವರುಣ ಜನಕ್ಕೆ ಅಪಾರ ಪ್ರೀತಿ ವಿಶ್ವಾಸ ಇದೆ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನ ಬದಲಾಯಿಸಲಿ ಏನೇ ಆದರೂ ನನ್ನ ಗೆಲುವು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ವಿನಯ್ ಕುಲಕರ್ಣಿಗೆ ಸಂಕಷ್ಟ: ಧಾರವಾಡ ಗ್ರಾಮೀಣ ಕ್ಷೇತ್ರ ಪ್ರವೇಶಕ್ಕೆ ಸಿಗದ ಅನುಮತಿ
ವರುಣವನ್ನ ತಾಲೂಕು ಮಾಡುತ್ತೇವೆ ಎಂಬ ಸಿಎಂ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾಲ್ಕು ವರ್ಷದ ಆಡಳಿತದಲ್ಲಿ ಯಾಕೇ ಆ ಕೆಲಸ ಮಾಡಲಿಲ್ಲ. ಸಿಎಂ ಬೊಮ್ಮಾಯಿ ನಂಬರ್ ಒನ್ ಸುಳ್ಳುಗಾರ. ವರುಣ ತಾಲೂಕು ಕೇಂದ್ರ ಅಲ್ಲ ಎಂಬುದು ಸಿಎಂ ಗೊತ್ತಿಲ್ಲ ಎನ್ನುವುದಾದರೆ ಆ ತಕ್ಷಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೇ ಕೊಡಬೇಕಿತ್ತು. ಈಗ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಇದು ಒಂದು ರೀತಿ ಅಚೇ ದಿನ ಆಗಾಯಾ ಎಂಬ ರೀತಿಯ ಸುಳ್ಳು ಎಂದರು.
ಮೊಮ್ಮಗನ ಸಾಥ್: ಸಿದ್ದರಾಮಯ್ಯ ಅವರು ಮೊಮ್ಮಗನಿಗೆ ರಾಜಕೀಯ ಟ್ರೈನಿಂಗ್ ಆರಂಭಿಸಿದ್ದಾರೆ. ದಿ.ರಾಕೇಶ್ ಸಿದ್ದರಾಮಯ್ಯ ಪುತ್ರನಿಗೆ ರಾಜಕೀಯ ತರಬೇತಿ ಶುರು ಮಾಡಿದ್ದಾರೆ. ಇಂದು ಬೆಂಗಳೂರಿನಿಂದ ಮೊಮ್ಮಗ ಧವನ್ ರಾಕೇಶ್ ಜೊತೆಯೇ ಬಂದಿದ್ದಾರೆ.
ಮೊಮ್ಮಗನ ಜೊತೆ ಬಂದಿದ್ದರ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ಅವನಿಗೆ ರಾಜಕೀಯದ ಬಗ್ಗೆ ಬಹಳ ಆಸಕ್ತಿಯಿದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವ ಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ. ಅವನಿಗೆ ಇನ್ನೂ 17 ವರ್ಷ ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ಈಗ ಆಸಕ್ತಿಯಿಂದ ಎಲ್ಲವನ್ನೂ ನೋಡಿಕೊಳ್ಳಲು ಬರುತ್ತಿದ್ದಾನೆ. ಮೊಮ್ಮಗನಿಗೆ ರಾಜಕೀಯ ಆಸಕ್ತಿ ಇರುವುದು ತಾತನಾಗಿ ನನಗೆ ಖುಷಿ ಇದೆ. ಪ್ರಚಾರಕ್ಕೆ ಅವನು ಇಷ್ಟ ಪಟ್ಟು ಬಂದರೆ ಬರಲಿ ಎಂದರು.