ಬೆಂಗಳೂರು: ಬಿಜೆಪಿಯವರದು ಜನಸಂಕಲ್ಪ ಯಾತ್ರೆಯಲ್ಲ, ಸುಳ್ಳು ಹೇಳುವ ಸಂಕಲ್ಪದ ಯಾತ್ರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಿಜೆಪಿಯವರು ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಹೇಳುವುದಿದ್ದರೂ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಒಂದಿಷ್ಟು ತೂಕ ಬರುತ್ತದೆ. ತಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ ಎಂದರು.
ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗೆ ಹಿಂದುಳಿದ ವರ್ಗದವರು, ದೀನ ದಲಿತರು ನೆನಪಾಗಲಿಲ್ಲ ಎಂದು ಬೊಮ್ಮಾಯಿಯವರು ರಾಯಚೂರಿನಲ್ಲಿ ಹೇಳಿದ್ದಾರೆ. 2013 ರಿಂದ 2018 ರವರೆಗೆ ಕಾಂಗ್ರೆಸ್ ಸರ್ಕಾರ ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಏನು ಮಾಡಿತ್ತು ಎಂದು ಕಡತಗಳನ್ನು ತರಿಸಿಕೊಂಡು ನೋಡಿ ಮಾತನಾಡಬೇಕೆ ಹೊರತು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿರುವುದು ಸುಳ್ಳು ಹೇಳುವುದಕ್ಕಲ್ಲ. ಸಿಎಂ ಆದಿಯಾಗಿ ಬಹುತೇಕ ಬಿಜೆಪಿಯವರು ತಾವು ಆರೆಸ್ಸೆಸ್ಸಿಗರು ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ಬೊಮ್ಮಾಯಿ, ಯಡಿಯೂರಪ್ಪ ಮುಂತಾದವರೆಲ್ಲ ಆರೆಸ್ಸೆಸ್ ಎಂದು ಹೇಳಿಕೊಳ್ಳುತ್ತಿರುವುದು ದೇಶದ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಬ್ರಹ್ಮಾಂಡ ಭ್ರಷ್ಟಾಚಾರದ ಹೊಲಸನ್ನು ಮೆತ್ತಿಕೊಂಡವರು, ಜನರನ್ನು ಕೊಂದು ಅಧಿಕಾರಕ್ಕೆ ಏರಿದ ಎಲ್ಲ ಬಿಜೆಪಿಗರು ಆರೆಸ್ಸೆಸ್ ಎಂದು ಬೇಗ ಘೋಷಿಸಿಕೊಂಡಷ್ಟೂ ಒಳ್ಳೆಯದೆಂದು ನಾಡಿನ ಬಗ್ಗೆ ಕಾಳಜಿ ಇರುವ ಜನ ಬಯಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಮಳೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆಯಲ್ಲಿ ಲೋಪ ಸಲ್ಲದು: ಸಿಎಂ ಬೊಮ್ಮಾಯಿ ಸೂಚನೆ
ಬೊಮ್ಮಾಯಿಯಂಥವರು ಅದು ಯಾವ ಬಾಯಿಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಗಳು ದೇಶಭಕ್ತಿಯ ಪರವಾಗಿವೆ ಎಂದು ಹೇಳುತ್ತಾರೆ? ಸಂವಿಧಾನವನ್ನು, ರಾಷ್ಟ್ರಧ್ವಜವನ್ನು, ರಾಷ್ಟ್ರಗೀತೆಯನ್ನು ವಿರೋಧಿಸಿದವರು, ರಾಷ್ಟ್ರಪಿತನನ್ನು ಕೊಂದವರು, ವೇಷ ಮರೆಸಿಕೊಂಡು ತಮ್ಮದೆ ಜನರ ವಿರುದ್ಧ ಹಿಂಸೆ ಮಾಡಿದವರು ಅದು ಹೇಗೆ ರಾಷ್ಟ್ರ ಭಕ್ತರಾಗಲು ಸಾಧ್ಯ? ಮೀಸಲಾತಿಯನ್ನು ವಿರೋಧಿಸಿದವರು, ದಲಿತ- ಹಿಂದುಳಿದ ಸಮುದಾಯದ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಿದವರು, ಈ ಸಮುದಾಯಗಳ ಜನರಿಗೆ ಮನೆಗಳನ್ನು ನೀಡದವರು, ಉದ್ಯೋಗ ನೀಡದವರು, ಸಮರ್ಪಕವಾಗಿ ಜನರಿಗೆ ಅನ್ನ ನೀಡದ ಬಿಜೆಪಿಯವರು ಅದು ಹೇಗೆ ಹಿಂದುಳಿದವರ, ದಲಿತರ ಪರವಾಗಿದ್ದೇವೆಂದು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.