Advertisement

ಶಿಕ್ಷಣ ಇಲಾಖೆಯಲ್ಲೂ ಕಮಿಷನ್: ಬಿಸಿ ನಾಗೇಶ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

03:42 PM Sep 04, 2022 | Team Udayavani |

ಬೆಂಗಳೂರು: ಆರ್ ಎಸ್ಎಸ್ ನಲ್ಲಿ ತರಬೇತಿ ಪಡೆದು ಬಂದಿರುವ ಬಿ.ಸಿ.ನಾಗೇಶ್ ಅವರು ರಾಜ್ಯ ಶಿಕ್ಷಣ ಸಚಿವರಾದಂದಿನಿಂದ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿರುವ ಕತೆ ಒಂದೊಂದಾಗಿ ಹೊರಬೀಳುತ್ತಿವೆ. ಪಠ್ಯಪುಸ್ತಕಗಳ ವಿವಾದದ ಮರೆಯಲ್ಲಿ ಇಲ್ಲಿ ನಡೆಯುತ್ತಿರುವುದು ಲಂಚಾವತಾರದ ಕುಣಿದಾಟ. ಇದು ಶಿಕ್ಷಣವೋ? ಭಕ್ಷಣೆಯೋ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪ್ರಾರಂಭದಿಂದಲೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿರುದ್ಧ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಈ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆಯಂತೆ. ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲವಂತೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆಯಂತೆ. ಎಂಥಾ ಅದ್ಭುತ ಪ್ಲಾನ್ ಎಂದಿದ್ದಾರೆ.

ಕಾಂಗ್ರೆಸ್‌ ನ ಮಹತ್ವಾಕಾಂಕ್ಷೆಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನೂ ರಾಜ್ಯ ಶಿಕ್ಷಣ ಇಲಾಖೆ ಹಳ್ಳ ಹಿಡಿಸಿದೆ. 2012ರಲ್ಲಿ ಆರ್ ಟಿಇ ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ, ಈಗ ಈ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಖಾಸಗಿ ಶಾಲೆಗಳಿಗೆ ಬಿಜೆಪಿ ಕರ್ನಾಟಕ ಸರ್ಕಾರದಿಂದಲೇ ಬೆಂಬಲ. ಆರ್ ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಬಿಜೆಪಿ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಂತೆ. ಶಿಕ್ಷಣ ಸಚಿವರು 40% ಕಮಿಷನ್ ಲೆಕ್ಕ ಹಾಕುತ್ತಿರುವಂತೆ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗ ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:ಸಾಯಿಬಾಬಾರ 3ನೇ ಅವತಾರ ಎಂದು ನಂಬಿಸಿ ಲಕ್ಷಾಂತರ ರೂ. ವಂಚನೆ: ಎಫ್ಐಆರ್‌  ದಾಖಲು

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆ ಕಡೆ ಸೆಳೆಯಲಿಕ್ಕಾಗಿಯೇ ಪಠ್ಯ ಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟುಹಾಕುತ್ತಿದ್ದಾರೆ. ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ. ಗುತ್ತಿಗೆದಾರರು ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಪ್ರಧಾನಿಗೆ ಪತ್ರ ಬರೆದಿದೆಯಂತೆ. ಮುಖ್ಯಮಂತ್ರಿಗಳು ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next