Advertisement

ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

02:30 PM Sep 10, 2022 | Team Udayavani |

ಹುಬ್ಬಳ್ಳಿ: ”ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ” ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಕಿಡಿ ಕಾರಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯದಲ್ಲಿ ಪ್ರವಾಹದಿಂದ 7 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. ರೈತರಿಗೆ ಇಲ್ಲಿವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಜನಸ್ಪಂದನ ಹೆಸರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ” ಎಂದು ಸರಕಾರದ ವಿರುದ್ಧ ಹರಿಹಾಯ್ದರು.

”ರಾಜ್ಯದಲ್ಲಿ ಪ್ರವಾಹವುಂಟಾಗಿ ಜನ ಸಮಸ್ಯೆ ಪಡುತ್ತಿದ್ದರೂ ಯಾವ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ. ಜನಸಾಮಾನ್ಯರ ಸಮಸ್ಯೆ ಬಗ್ಗೆ ಇವರಿಗೆ ಸ್ವಲ್ಪವಾದರೂ ಕಾಳಜಿ ಇಲ್ಲ. ಹಣ ಹೊಡೆಯುವುದೆ ಇವರ ಅಜೆಂಡಾ ಆಗಿದೆ” ಎಂದು ಕಿಡಿ ಕಾರಿದರು.

”ದಾವಣಗೆರೆಯಲ್ಲಿ ನಡೆದ ನನ್ನ ಜನ್ಮೋತ್ಸವದ ಪ್ರತ್ಯುತ್ತರವಾಗಿ ಜನ ಸ್ಪಂದನ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಜನ ಸ್ವಯಂಪ್ರೇರಿತರಾಗಿ ಆಗಮಿಸಿದ್ದರು. ಆದರೆ ಇಲ್ಲಿ ಭ್ರಷ್ಟಾಚಾರದ ಹಣದಲ್ಲಿ ಜನರನ್ನು ಕರೆದುಕೊಂಡು ಬಂದು ಸಮಾರಂಭ ಮಾಡುತ್ತಿದ್ದಾರೆ” ಆಕ್ರೋಶ ವ್ಯಕ್ತಪಡಿಸಿದರು.

”ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹಾಗೂ ಬಿಜೆಪಿಯ ಹಿರಿಯ ಮುತ್ಸದ್ಧಿಯಾಗಿದ್ದರು.‌ ಅವರ ಬಗ್ಗೆ ಒಂದು ಕಡೆ ಶೋಕಚಾರಣೆ ಅನ್ನುತ್ತಾರೆ. ಇನ್ನೊಂದು ಕಡೆ ಡ್ಯಾನ್ಸ್ ಮಾಡುತ್ತಿದ್ದಾರೆ” ಎಂದರು.

Advertisement

”ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಿದ್ದಾರೆ. ಆತನ ವಿರುದ್ಧ ಎಫ್ ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು. ಪಿಎಸ್ಐ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ಆದರೆ ಅವರ ಶಾಸಕ ಸ್ವತಃ ಒಪ್ಪಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಪ್ರತಿಯೊಂದು ವಿಷಯದಲ್ಲೂ ಸೇಡಿನ ರಾಜಕೀಯ ಮಾಡುತ್ತಿದ್ದಾರೆ” ಎಂದರು.

”ಎಸಿಬಿ ರದ್ದು ಪಡಿಸಿ ಲೋಕಾಯುಕ್ತ ಮರು ರಚನೆ ಮಾಡಿರುವುದಕ್ಕೆ ನಾವು ಸ್ವಾಗತ ಮಾಡಿದ್ದೇವೆ. ನ್ಯಾಯಾಲಯದಿಂದಲೇ ಆದೇಶವಿದೆ ಹೀಗಾಗಿ ಸ್ವಾಗತ ಮಾಡುತ್ತೇವೆ” ಎಂದರು.

“ಜನಸ್ಪಂದನ” ಅಲ್ಲ ‘ಜನ ಮರ್ದನ’

”ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ವರ್ಷ ತುಂಬಿದ್ದಕ್ಕಾಗಿ ಜನಸ್ಪಂದನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ “ಜನಸ್ಪಂದನ” ಅಲ್ಲ ‘ಜನ ಮರ್ದನ” ಎಂದು ಹೆಸರಿಡಬೇಕಾಗಿತ್ತು. ಕಳೆದ ಮೂರು ವರ್ಷಗಳ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸುಳ್ಳು ಹೇಳಿಕೆಗಳಿಂದಾಗಿ ಜನ ನಲುಗಿಹೋಗಿದ್ದಾರೆ. ಸ್ಪಂದನ ಮಾಡಲು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ವಿರೋಧ ಪಕ್ಷಗಳು ಇವರನ್ನು ಪ್ರಶ್ನೆ ಮಾಡಿದರೆ ಸಿಬಿಐ, ಇಡಿ, ಐಟಿ ದಾಳಿ ನಡೆಸಿ ಬೆದರಿಸುತ್ತಾರೆ. ನಾಗರಿಕರು ಪ್ರಶ್ನೆ ಮಾಡಿದರೆ ಸುಳ್ಳು ಕೇಸ್ ಗಳನ್ನು ಹಾಕಿ ಜೈಲಿಗೆ ಹಾಕುತ್ತಾರೆ. ಜನ ಸ್ಪಂದಿಸುವುದಾದರೂ ಹೇಗೆ?” ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next