ವಿಜಯಪುರ: ಪ್ರಾದೇಶಿಕ ಪಕ್ಷಗಳನ್ನು ಅದರಲ್ಲೂ ಜೆಡಿಎಸ್ ಪಕ್ಷವನ್ನು ಮುಗಿಸಲು ರಾಷ್ಟ್ರೀಯ ಪಕ್ಷಗಳು ಪ್ರಯತ್ನಿಸಬೇಕಿಲ್ಲ. ಆ ಪಕ್ಷದ ನಾಯಕರೇ ಸ್ವಯಂಕೃತ ನಡವಳಿಕೆ, ತತ್ವ, ಸಿದ್ದಾಂತ ರಹಿತ ನಡೆಯಿಂದ ಸ್ವಯಂ ಜೆಡಿಎಸ್ ಪಕ್ಷವನ್ನು ಮುಗಿಸಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷ ಮುಗಿಸುತ್ತಿವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಮಾಡಿರುವ ಅರೋಪ ಸರಿಯಲ್ಲ. ಇಷ್ಟಕ್ಕೂ ನಾವ್ಯಾಕೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸೋಣ. ಅವರ ನಡವಳಿಕೆಗಳಿಂದಲೇ ಅವರು ಮುಗಿದು ಹೋಗಲಿದ್ದಾರೆ. ಯಾವುದೇ ತತ್ವ ಸಿದ್ಧಾಂತಗಳಿಲ್ಲದ ನಡೆಯಿಂದ ಅವರೇ ಮುಗಿದು ಹೋಗುತ್ತಾರೆ ಎಂದು ಲೇವಡಿ ಮಾಡಿದರು.
ಚುನಾವಣೆ ಇದ್ದಾಗ ಜೆಡಿಎಸ್ ಸೇರಿದಂತೆ ಎಲ್ಲರ ವಿರುದ್ಧ ಪ್ರಚಾರ ಮಾಡಲೇಬೇಕು. ಪ್ರಚಾರ ಮಾಡುತ್ತೇವೆ, ಜೆಡಿಎಸ್ ಸೋಲುತ್ತದೆ ಅಷ್ಟೇ ಇರುವುದು. ಮುಗಿಸಲು ಬಿಡುವುದಿಲ್ಲ ಎನ್ನುವುದಾದರೆ ಅವರೇ ಇಟ್ಟುಕೊಳ್ಳಲಿ. ನಾವೇನೂ ಬೇಡ ಎನ್ನುವುದಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಸೋತವನ ವಿರುದ್ದವೇ ಶರಣಾಗಿದ್ದೀಯ: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್
ದೇವೇಗೌಡರೂ ಸಹ ಕಾಂಗ್ರೆಸ್ ಪಕ್ಷದ ಹಿನ್ನೆಲೆಯಿಂದಲೇ ಬಂದವರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷ ಜನರ ನಂಬಿಕೆಗೆ ಅರ್ಹ ಅಲ್ವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜೆಡಿಎಸ್ ಸ್ವಾತಂತ್ರ್ಯ ತಂದು ಕೊಟ್ಟಿದೆಯಾ ಎಂದು ಕೆಣಕಿದರು.
ಕಂಬಳಿ ಹೊದಿಯುವ ಯೋಗ್ಯತೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ಏನ್ ಕಂಬಳಿರಿ, ಅವನು ಕುರುಬರಲ್ಲಿ ಹುಟ್ಟಿದ್ದಾನಾ, ನಾನು ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.