Advertisement

ದೆಹಲಿಗೆ ತೆರಳಿದ ಸಿದ್ದರಾಮಯ್ಯ, ಪರಮೇಶ್ವರ್‌

07:42 AM Jun 18, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ದೆಹಲಿಗೆ ತೆರಳಿದ್ದು, ಲೋಕಸಭಾ ಚುನಾವಣೆಯ ಸೋಲು, ಜಿಂದಾಲ್‌ಗೆ ಭೂಮಿ ಮಾರಾಟ ಪ್ರಕರಣ ಹಾಗೂ ಜೆಡಿಎಸ್‌ ಜತೆಗಿನ ಮೈತ್ರಿಯಲ್ಲಿನ ಗೊಂದಲಗಳ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ವಿವರಣೆ ನೀಡುವ ಸಾಧ್ಯತೆಯಿದೆ.

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರೇ ಪಕ್ಷದ ಬಲವರ್ಧನೆ ಕುರಿತಂತೆ ಚರ್ಚಿಸಲು ಎಲ್ಲ ರಾಜ್ಯಗಳ ಕಾಂಗ್ರೆಸ್‌ ಶಾಸಕಾಂಗ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಫ‌ಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಾಹುಲ್‌ ಗಾಂಧಿ ಜತೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಅನೇಕ ನಾಯಕರು ರಾಹುಲ್‌ ಗಾಂಧಿಗೆ ದೂರು ನೀಡಿದ್ದರು. ಅಲ್ಲದೇ ರೋಷನ್‌ ಬೇಗ್‌ ಸೇರಿ ಕೆಲವು ನಾಯಕರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದರು. ನೇರವಾಗಿ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರಾದ ಗುಲಾಂ ನಬಿ ಆಝಾದ್‌ ಹಾಗೂ ಅಹಮದ್‌ ಪಟೇಲ್‌ ಅವರಿಗೆ ದೂರು ನೀಡಿದ್ದರು.

ಇದರ ಬೆನ್ನಲೇ ಕೆಲವು ಹಿರಿಯ ನಾಯಕರು ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಎರಡು ಹುದ್ದೆಗಳನ್ನು ಹೊಂದಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮೈತ್ರಿ ಸರ್ಕಾರದಲ್ಲಿನ ಗೊಂದಲಗಳನ್ನು ನಿವಾರಿಸುವ ಬದಲು ತಾವೇ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆಂದು ಆರೋಪ ಮಾಡಿದ್ದರು. ಸಮನ್ವಯ ಸಮಿತಿ ಅಧ್ಯಕ್ಷರ ಹುದ್ದೆಯಿಂದ ಕೈ ಬಿಟ್ಟು ಮತ್ತೂಬ್ಬ ಹಿರಿಯ ನಾಯಕರಿಗೆ ಆ ಹುದ್ದೆ ನೀಡಬೇಕೆಂದು ಒತ್ತಡ ಹೇರಿದ್ದರು.

ಇದರ ಜತೆಗೆ, ರಾಜ್ಯ ಸರ್ಕಾರ ಜಿಂದಾಲ್‌ ಸಂಸ್ಥೆಗೆ 3,667 ಎಕರೆ ಜಮೀನು ಮಾರಾಟ ಮಾಡುವ ತೀರ್ಮಾನ ಮಾಡಿದ್ದು ಸಾರ್ವಜನಿಕವಾಗಿ ವಿಶೇಷವಾಗಿ ಪಕ್ಷದಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದು ಕಾಂಗ್ರೆಸ್‌ನ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ, ಸರ್ಕಾರ ಸಂಪುಟದ ನಿರ್ಧಾರವನ್ನು ತಡೆ ಹಿಡಿದು ಸಂಪುಟ ಉಪ ಸಮಿತಿ ರಚಿಸಿದೆ.

Advertisement

ಜಿಂದಾಲ್‌ ವಿಷಯದಲ್ಲಿ ಇಷ್ಟೆಲ್ಲ ಬೆಳವಣಿಗೆಯಾದರೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದರು. ಈ ಬಗ್ಗೆಯೂ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಿದ್ದರು. ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಸಿದ್ದರಾಮಯ್ಯ ಆಪ್ತರಾಗಿರುವುದರಿಂದ, ಈ ಪ್ರಕರಣದಲ್ಲಿ ಜಾರ್ಜ್‌ ಮೂಲಕ ಸರ್ಕಾರ, ವಿಶೇಷವಾಗಿ ಕಾಂಗ್ರೆಸ್‌ ಲಾಭ ಪಡೆದುಕೊಂಡಿದೆ ಎಂದು ಬಿಜೆಪಿಯವರು ಆರೋಪ ಮಾಡಿದ್ದರು.

ಇದಲ್ಲದೇ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ಶಾಸಕರನ್ನು ಕಡೆಗಣಿಸಿ ಪಕ್ಷೇತರರಿಗೆ ಮಾತ್ರ ಅವಕಾಶ ಕಲ್ಪಿಸಿರುವ ಬಗ್ಗೆಯೂ ಪಕ್ಷದಲ್ಲಿ ಅಪಸ್ವರ ಕೇಳಿ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದ್ದು, ರಾಹುಲ್‌ ಗಾಂಧಿಯೊಂದಿಗಿನ ಭೇಟಿ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪಗಳಿಗೆ ವಿವರಣೆ ನೀಡುವ ಸಾಧ್ಯತೆಯಿದೆ.

ಅಲ್ಲದೇ ರಾಜ್ಯದಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿ ಬಗ್ಗೆ ಪಕ್ಷದ ಶಾಸಕರಲ್ಲಿ ಅಸಮಾಧಾನ ಇರುವ ಬಗ್ಗೆಯೂ ಸಿದ್ದರಾಮಯ್ಯ ರಾಹುಲ್‌ ಗಾಂಧಿ ಗಮನಕ್ಕೆ ತರುವ ಸಾಧ್ಯತೆಯಿದೆ. ಜತೆಗೆ, ಬಿಜೆಪಿಯ “ಆಪರೇಷನ್‌ ಕಮಲ’ ತಡೆದು ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲು ತಾವು ಮಾಡುತ್ತಿರುವ ಪ್ರಯತ್ನದ ಬಗ್ಗೆ ರಾಹುಲ್‌ ಗಾಂಧಿಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಪರಮೇಶ್ವರ್‌ರಿಂದ ಪ್ರತ್ಯೇಕ ಮಾಹಿತಿ: ಇದೇ ವೇಳೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕೂಡ ದೆಹಲಿಗೆ ಭೇಟಿ ನೀಡಿದ್ದು, ಮೂರು ದಿನ ದೆಹಲಿಯಲ್ಲಿಯೇ ಉಳಿಯಲಿದ್ದಾರೆ. ಅವರೂ ರಾಹುಲ್‌ ಗಾಂಧಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next