ಬಾಗಲಕೋಟೆ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬರುವ ಆಗಸ್ಟ್ 9, 10, 11 ರಂದು ಮೂರು ದಿನಗಳ ಕಾಲ ಬಾದಾಮಿಯಿಂದ ಬಾಗಲಕೋಟೆ ವರೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಶಾಸಕ ಸಿದ್ಧರಾಮಯ್ಯ ಅವರು ಪಾದಯಾತ್ರೆ ಮಾಡಲಿದ್ದಾರೆ.
ಕಳೆದ 4 ವರ್ಷಗಳ ಕಾಲ ತಮ್ಮ ಅವಧಿಯಲ್ಲಿ ಬಾದಾಮಿ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದು, ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಬಹುತೇಕ ಗ್ರಾಮೀಣ ಭಾಗದವರಿಗೆ ಮತ್ತು ಮತಕ್ಷೇತ್ರದ ಜನರ ಬಳಿಗೆ ಹೋಗಿ ಭೇಟಿಯಾಗಲಿದ್ದಾರೆ. ಮೂರು ದಿನಗಳ ಕಾಲ ರೂಟ್ ಮ್ಯಾಪ್ ತಯಾರಿಸಲು ಸೂಚಿಸಿದ್ದಾರೆ. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ, ನನ್ನದು ಸಲಹೆ ಮಾತ್ರ: ಯಡಿಯೂರಪ್ಪ
ಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎಂಬ ಚರ್ಚೆ ನಡೆದಿರುವ ಬೆನ್ನಲ್ಲೆ ಸಿದ್ದರಾಮೋತ್ಸವ ಮತ್ತು ಪಾದಯಾತ್ರೆ ಮಾಡುವ ಮೂಲಕ ಪುನಃ ಬಾದಾಮಿಯಿಂದಲೇ ಸ್ಪರ್ಧಿಸಲು ವೇದಿಕೆ ಸಿದ್ದಪಡಿಸುತ್ತಿದ್ದಾರೆ. ಇನ್ನೊಂದು ಬಾರಿ ಬಾದಾಮಿಯಿಂದ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂಬುದೇ ಬಾದಾಮಿ ಮತಕ್ಷೇತ್ರದ ಜನರ ಆಶಯವಾಗಿದೆ.
-ವರದಿ: ಮಹಾಂತಯ್ಯ ಹಿರೇಮಠ ಕುಳಗೇರಿ ಕ್ರಾಸ್