ಬೆಂಗಳೂರು: ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ಸಂಚು ನಡೆಯುತ್ತಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ”ರಾಜ್ಯ ಬಿಜೆಪಿಯಲ್ಲಿರುವ ಲಿಂಗಾಯತ ಸಮುದಾಯದ ನಾಯಕರನ್ನು ನೋಡಿದಾಗ ‘ ಹಾವಿನ ಹೆಡೆಯ ಮೇಲಿನ ಕಪ್ಪೆ ಹಾರುವ ನೊಣಕ್ಕೆ ಆಶಿಸಿದಂತೆ… ಎಂಬ ಬಸವಣ್ಣನವರ ವಚನ ನೆನಪಾಗುತ್ತಿದೆ. ರಾಜಕೀಯವಾಗಿ ತಮ್ಮನ್ನು ಮುಗಿಸಲು ಆರ್ ಎಸ್ ಎಸ್ ‘ವಿಘ್ನಸಂತೋಷಿ’ಗಳು ಮಾಡುತ್ತಿರುವ ಸಂಚನ್ನು ಅರಿಯದ ಬಿಜೆಪಿಯ ಲಿಂಗಾಯತ ನಾಯಕರು, ಕಾಂಗ್ರೆಸ್ ಪಕ್ಷ ಲಿಂಗಾಯತ ವಿರೋಧಿ ಎಂಬ ಸುಳ್ಳು ಆರೋಪ ಮಾಡುತ್ತಾ ಕಾಲ ಕಳೆಯುತ್ತಿರುವುದು ವಿಷಾದನೀಯ.ರಾಜ್ಯದಲ್ಲಿ ನೆಲೆಯೇ ಇಲ್ಲದಿದ್ದ ಬಿಜೆಪಿಯನ್ನು ಅಧಿಕಾರದ ಪೀಠದಲ್ಲಿ ತಂದು ಕುಳ್ಳಿರಿಸಿದ ಲಿಂಗಾಯತ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದು ಆರ್ ಎಸ್ ಎಸ್ ನ ‘ವಿಘ್ನ ಸಂತೋಷಿ’ಗಳೇ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
”ಜಗದೀಶ್ ಶೆಟ್ಟರ ರಾಜಕೀಯ ಜೀವನವನ್ನು ಮುಗಿಸುವ ಹುನ್ನಾರದ ರೂವಾರಿಗಳು ಕೂಡಾ ಇದೇ ‘ವಿಘ್ನ ಸಂತೋಷಿ’ ಗಳು. ಕಾಂಗ್ರೆಸ್ ಅಲ್ಲ.ಗೆಲ್ಲುವ ಅವಕಾಶವೇ ಇಲ್ಲದ ವರುಣಾ ಕ್ಷೇತ್ರದಲ್ಲಿ ಒಲ್ಲೆನೆಂದರೂ ಬಲಾತ್ಕಾರವಾಗಿ ವಿ.ಸೋಮಣ್ಣ ಎಂಬ ಲಿಂಗಾಯತ ನಾಯಕನನ್ನು ಅಭ್ಯರ್ಥಿ ಮಾಡಿದ್ದು ಕೂಡಾ ಇದೇ ಆರ್ ಎಸ್ ಎಸ್ ‘ವಿಘ್ನ ಸಂತೋಷಿ’ಗಳು.” ಎಂದು ಪರೋಕ್ಷವಾಗಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಲಕ್ಷ್ಮಣ ಸವದಿ, ಸೊಗಡು ಶಿವಣ್ಣ, ಸಂಜಯ್ ಪಾಟೀಲ್ ಮೊದಲಾದ ಲಿಂಗಾಯತ ನಾಯಕರಿಗೆ ಟಿಕೆಟ್ ನಿರಾಕರಿಸಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದು ಕೂಡಾ ಇದೇ ಆರ್ ಎಸ್.ಎಸ್ ‘ವಿಘ್ನ ಸಂತೋಷಿ’ಗಳು.ಈಗ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಹೊಣೆಯನ್ನು ಕೂಡಾ ಬಿ.ಎಸ್.ಯಡಿಯೂರಪ್ಪನವರ ಮೇಲೆ ಹೊರಿಸಲಾಗಿದೆ. ಇವರಲ್ಲಿ ಯಾರೂ ಸೋತರೂ ಒಬ್ಬ ಲಿಂಗಾಯತ ನಾಯಕರು ಸೋತ ಹಾಗೆ ಅಲ್ಲವೇ?ಆದರೆ ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ತಮ್ಮ ನಿಜವಾದ ಶತ್ರುಗಳು ಯಾರೆಂದು ಅರ್ಥಮಾಡಿಕೊಳ್ಳದೆ, ವೃಥಾ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಇದು ಕೂಡಾ ಆರ್ ಎಸ್ ಎಸ್ ನ ‘ವಿಘ್ನ ಸಂತೋಷಿ’ಗಳ ಹುನ್ನಾರವೇ ಆಗಿದೆ ಎಂದು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಬದಲಾವಣೆಯ ಹೆಸರಲ್ಲಿ ಬಿಜೆಪಿಯೊಳಗಿನ ಆರ್ ಎಸ್ ಎಸ್ ‘ವಿಘ್ನ ಸಂತೋಷಿ’ಗಳು ಮಾಡುತ್ತಿರುವ ಈ ಎಲ್ಲ ಪ್ರಯೋಗಗಳು ಅಂತಿಮವಾಗಿ ಪಕ್ಷದೊಳಗಿನ ಹಿರಿಯ ಮತ್ತು ಪ್ರಭಾವಿ ಲಿಂಗಾಯತ ನಾಯಕರ ತಲೆದಂಡ ತೆಗೆದುಕೊಳ್ಳುವ ರಾಜಕೀಯ ಕುತಂತ್ರವೇ ಆಗಿದೆ ಎನ್ನುವುದನ್ನು ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಮತ್ತು ಒಟ್ಟು ಲಿಂಗಾಯತ ಸಮುದಾಯ ಅರಿತುಕೊಳ್ಳಬೇಕಾಗಿದೆ.ಈಗಲೂ ಕಾಲ ಮಿಂಚಿಲ್ಲ, ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಕಲ್ಪಿತ ಶತ್ರುವಿನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ ತಮ್ಮ ನಿಜವಾದ ಶತ್ರುಗಳನ್ನು ಗುರುತಿಸಿ ಹೋರಾಟ ನಡೆಸಬೇಕೆಂದು ಮನವಿ ಮಾಡುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದೂ ಮಾತ್ರವಲ್ಲದೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.