Advertisement

ವಿಮ್ಸ್‌ ಪ್ರಕರಣಕ್ಕೆ ಸರ್ಕಾರವೇ ಹೊಣೆ: ಸಿದ್ದರಾಮಯ್ಯ

09:16 PM Sep 15, 2022 | Team Udayavani |

ವಿಧಾನಸಭೆ: ಬಳ್ಳಾರಿಯ ವಿಮ್ಸ್‌ನಲ್ಲಿ ಮೂವರು ಮೃತಪಟ್ಟ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಬಳ್ಳಾರಿಯ ವಿಮ್ಸ್‌ನಲ್ಲಿ ವಿದ್ಯುತ್‌ ಕೊರತೆಯಿಂದ ವೆಂಟಿಲೇಟರ್‌ ಕೆಲಸ ಮಾಡದೆ ಮೂವರು ಅಮಾಯಕರು ಪ್ರಾಣ ತೆತ್ತಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಘಟನೆಗೆ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಹೊಣೆ ಹೊರಬೇಕೆಂದು ಆಗ್ರಹಿಸಿದರು.

ಸಿದ್ದರಾಮಯ್ಯ ನೀಡಿದ್ದ ನೋಟಿಸ್‌ನಲ್ಲಿ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಪದ ಬಳಕೆಗೆ ಕಾನೂನು ಸಚಿವ ಮಾಧುಸ್ವಾಮಿ, ಉಸ್ತುವಾರಿ ಸಚಿವ ಶ್ರೀರಾಮುಲು ಆಕ್ಷೇಪ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಚಕಮಕಿಗೂ ಕಾರಣವಾಯಿತು.

ವಿದ್ಯುತ್‌ ಕೊರತೆ ಇಲ್ಲ, ಜನರೇಟರ್‌ ಕೆಲಸ ಮಾಡುತ್ತಿತ್ತು ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಆದರೂ ಪ್ರಕರಣದ ತನಿಖೆ ಮಾಡಿಸಲಾಗುವುದು, ಸರ್ಕಾರದ ವೈಫ‌ಲ್ಯ ಇದ್ದರೆ ಪರಿಹಾರದ ಬಗ್ಗೆ ಪರಿಶೀಲಿಸುವುದಾಗಿ ಮಾಧುಸ್ವಾಮಿ ಭರವಸೆ ನೀಡಿದರು.

ಸರ್ಕಾರದ ಪರ ಉತ್ತರ ನೀಡಿದ ಶ್ರೀರಾಮುಲು, ಪ್ರಕರಣಕ್ಕೆ ವಿದ್ಯುತ್‌ ಪೂರೈಕೆ ಸಮಸ್ಯೆ ಕಾರಣವಲ್ಲ ಎಂದರು, ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ಸಾವಿನಲ್ಲಿ ಚೆಲ್ಲಾಟ ಆಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈಫ‌ಲ್ಯ ಇದ್ದರೆ ತನಿಖೆ ನಡೆಸೋಣ. ಆದರೆ, ಸರ್ಕಾರಿ ಪ್ರಾಯೋಜಿತ ಕೊಲೆ ಎಂದರೆ ಹೇಗೆ ಎಂದು ಶ್ರೀರಾಮುಲು ಪ್ರಶ್ನಿಸಿದರು.

Advertisement

ಅದಕ್ಕೆ ಸಿದ್ದರಾಮಯ್ಯ, ಹೌದು, ಅವರ ಸಾವಿಗೆ ಸರ್ಕಾರವೇ ಕಾರಣ ಎಂದು ವಾದಿಸಿದರು. ಸ್ಪೀಕರ್‌ ಮಧ್ಯಪ್ರವೇಶಿಸಿ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ. ವರದಿ ಬರಲಿ ಎಂದು ವಿಷಯಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next