Advertisement

ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ ಯೋಜನೆಗೆ ಸಿದ್ದರಾಮಯ್ಯ ವಿರೋಧ

12:14 PM Jun 17, 2022 | Team Udayavani |

ಬೆಂಗಳೂರು: ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ರೈತರನ್ನು ಬಲಿಗೊಟ್ಟಾಯಿತು, ಈಗ ಸೈನಿಕರ ಸರದಿಯೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟು ಹಾಕಲಿರುವ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಲು ಸಾಧ್ಯವೇ? ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ?  ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗುವ ಸೈನಿಕರಿಗೆ ಉದ್ಯೋಗದ ಭದ್ರತೆ, ನ್ಯಾಯಬದ್ಧ ಸಂಬಳ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗದಷ್ಟು ಕೇಂದ್ರದ ಬಿಜೆಪಿ ಸರ್ಕಾರ ದಿವಾಳಿಯಾಗಿದೆಯೇ? ನಿಮ್ಮ ದಿವಾಳಿತನ ಮುಚ್ಚಿಡಲು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡಲು ಹೋಗಬೇಡಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಅಗ್ನಿಪಥ್ ಯೋಜನೆಗೆ ವಿರೋಧ; ಮುಂದುವರಿದ ಹಿಂಸಾಚಾರ, ಬಿಹಾರ ಉಪ ಮುಖ್ಯಮಂತ್ರಿ ಮನೆ ಮೇಲೆ ದಾಳಿ

Advertisement

ಹೊಸಸೇನಾ ನೇಮಕಾತಿ ಅಗ್ನಿಪಥ್ ಕೇವಲ ಸೇನಾ ನೇಮಕಾತಿಗಷ್ಟೇ ಸೀಮಿತವಾಗಲಾರದು. ಸೈನಿಕರ ಅನ್ನ ಕಸಿಯಲು ಹೊರಟಿರುವ ಈ ದೇಶದ್ರೋಹಿ, ಜನವಿರೋಧಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತ. ಎಚ್ಚೆತ್ತುಕೊಳ್ಳಲು ಇದು ಸಕಾಲ. ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದ ಜನ ಪಾಠ ಕಲಿಸಿದ್ದಾರೆ. ಈಗ ಯುವಜನರ ಬದುಕು ನಾಶದ ಜೊತೆಯಲ್ಲಿ ಸೈನಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವರಿಗೂ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next