ಬೆಂಗಳೂರು: “ಮಹಿಳೆಯರ ಮೇಲಿನ ದೌರ್ಜನ್ಯ, ದರೋಡೆ ಮತ್ತಿತರ ಅಪರಾಧ ಪ್ರಕರಣಗಳ ಅಂಕಿ-ಅಂಶ ಗಮನಿಸಿದರೆ
ಕರ್ನಾಟಕವು ಲಾಲು ಪ್ರಸಾದ್ ನೇತೃತ್ವದ ಜಂಗಲ್ ರಾಜ್ಯವಾಗಿ ಬದಲಾದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ “ನ್ಯೂ ವರ್ಷನ್ ಆಫ್ ಲಾಲು ಪ್ರಸಾದ್’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಟೀಕಿಸಿದ್ದಾರೆ.
ಬೆಂಗಳೂರು ಪ್ರಸ್‌ಕ್ಲಬ್ ಮತ್ತು ವರದಿಗಾರರ ಕೂಟದಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ 1,380ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರ ಕಗ್ಗೊಲೆ, ಸರಣಿ ಸರಗಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇಲ್ಲಿನ ಕಾನೂನು ಸುವ್ಯವಸ್ಥೆಯ ಅವ್ಯವಸ್ಥೆ ನೋಡಿದರೆ, ಬಿಹಾರದ ಲಾಲು ಪ್ರಸಾದ್ ನೇತೃತ್ವದ ಜಂಗಲ್ ರಾಜ್ಯವಾಗಿ ಕರ್ನಾಟಕ ಬದಲಾದಂತಿದೆ. ಸಿದ್ದರಾಮಯ್ಯ
ಕರ್ನಾಟಕದ ಲಾಲೂ ಪ್ರಸಾದ್ ಆಗಿದ್ದಾರೆ’ ಎಂದು ಆರೋಪಿಸಿದರು.
ದೇಶಾದ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ವಿಭಜನೆ, ವಿಘಟನೆ ಯಾಗಲಿದೆ. ಇದಕ್ಕೆ ರಾಹುಲ್ ಗಾಂಧಿಯವರ ನೇತೃತ್ವ ಮತ್ತು ಕಾಂಗ್ರೆಸ್ ಸಂಸ್ಕೃತಿಯೇ ಕಾರಣವಾಗಲಿದೆ. 40 ವರ್ಷ ದೇಶದಲ್ಲಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಇಂದು ಮಾರ್ಜಿನ್ ಪಾರ್ಟಿಯಾಗಿ ಬದಲಾಗುತ್ತಿದೆ. ಜನಮಾನಸದಿಂದ ದೂರವಾಗಿ ಸಾಮಾಜಿಕ ಜಾಲತಾಣ ಸೇರಿಕೊಳ್ಳುತ್ತಿದೆ. ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಮಧ್ಯಾಹ್ನ ರಾಹುಲ್ ಗಾಂಧಿ ಹಾಗೂ ಸಂಜೆ ರಮ್ಯಾ ಅವರ ಟ್ವೀಟ್‌ಗೆ ಕಾಂಗ್ರೆಸ್ ಪಕ್ಷ ಸಿಮೀತವಾಗಿದೆ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಬಿಜೆಪಿ 150 ಸೀಟುಗಳೊಂದಿಗೆ ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹೀನಾಯವಾಗಿ ಸೋಲಲಿದೆ. ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗುತ್ತದೆ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬುದ ಶುದ್ಧ ಸುಳ್ಳು. ಪ್ರಧಾನಿ ಮೋದಿಯವರು ದಿನದಲ್ಲಿ 18ಗಂಟೆ ಕೆಲಸ ಮಾಡಿದರೆ, ಸಿಎಂ ಸಿದ್ದರಾಮಯ್ಯ ಅವರು 18 ಗಂಟೆ ನಿದ್ದೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೇಲಿರುವ ಆರೋಪಗಳೆಲ್ಲ ಸುಳ್ಳು. ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಕೇಂದ್ರದ ಮೋದಿ ಸರ್ಕಾರ 4 ವರ್ಷದಲ್ಲಿ ಭ್ರಷ್ಟಾಚಾರ ರಹಿತವಾದ ಅಭಿವೃದ್ಧಿ ಪರ ಸರ್ಕಾರ ನೀಡಿದೆ. ರೈತಪರ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಮತದಾರರು ಶ್ರೀರಕ್ಷೆ ನೀಡಲಿದ್ದಾರೆ. ಯಡಿಯೂರಪ್ಪ ಅವರೇ ಮುಂದಿನ ಐದು ವರ್ಷದ ಮುಖ್ಯಮಂತ್ರಿ, ನಾನೂ ಊಹಿಸಿರುವುದಕ್ಕಿಂತ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿ ಬಿಜೆಪಿ ನನಗೆ ನೀಡಿದೆ ಎಂದು ಹೇಳಿದರು.
ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಇರುವ ಬಗ್ಗೆ ಯಡಿಯೂರಪ್ಪ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಒಗ್ಗಟ್ಟಾಗಿದೆ. 21 ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಕೆಲವೇ ದಿನದಲ್ಲಿ 22ನೇ ರಾಜ್ಯದಲ್ಲೂ ಅಧಿಕಾರ ನಡೆಸಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ದಿನದಲ್ಲಿ 18ಗಂಟೆ ಕೆಲಸ ಮಾಡಿದರೆ, ಸಿಎಂ ಸಿದ್ದರಾಮಯ್ಯ ಅವರು 18 ಗಂಟೆ ನಿದ್ದೆ ಮಾಡುತ್ತಿದ್ದಾರೆ.
ಅನಂತ್ ಕುಮಾರ್, ಕೇಂದ್ರ ಸಚಿವ