ಗುಂಡ್ಲುಪೇಟೆ: ನಂಜನಗೂಡು ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಚುನಾವಣೆಯಲ್ಲ, ಇದು ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚುನಾವಣೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಬಣ್ಣಿಸಿದರು. ಪಟ್ಟಣದ ನೆಹರೂ ಪಾರ್ಕ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಂಜನಗೂಡು ಉಪ ಚುನಾವಣೆಯು ಕೇವಲ ಪಕ್ಷಗಳ ಚುನಾವಣೆಯಲ್ಲ. ಬದಲಾಗಿ ನನ್ನ ಸ್ವಾಭಿಮಾನ ಮತ್ತು ಸಿಎಂ ಸಿದ್ದರಾಮಯ್ಯನವರ ದುರಾಡಳಿತದ ನಡುವೆ ನಡೆಯುತ್ತಿರುವ ಚುನಾವಣೆ. ಈ ಚುನಾವಣೆಯಲ್ಲಿ ನಾನು ಸೋತರೆ ರಾಜಕೀಯ ನಿವೃತ್ತಿಯನ್ನು ಹೊಂದುತ್ತೇನೆ.
ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಸವಾಲು ಹಾಕಿದರು. ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಃಸಿದ್ಧ. ಇದು ರಾಜ್ಯ ರಾಜಕಾರಣದ ದಿಕ್ಸೂಚಿಯನ್ನು ತೋರಿಸಲಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಮುಖಭಂಗವಾಗುವುದು ಗ್ಯಾರೆಂಟಿ ಎಂದರು.
ತಾವು ಕಂದಾಯ ಸಚಿವನಾಗಿದ್ದಾಗ ಪೋಡಿ ಮುಕ್ತ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸಿದೆ. 1768 ಸರ್ವೆಯರ್‌ಗಳನ್ನು ಹೊಸದಾಗಿ ನೇಮಕ ಮಾಡಿ ಕಂದಾಯ ಇಲಾಖೆಯಲ್ಲಿ ಕ್ರಾಂತಿಯನ್ನು ಮೂಡಿಸಿದೆ. ಯಾವುದೇ ಮುನ್ಸೂಚನೆ ನೀಡದೆ ತಮ್ಮನ್ನು ಮಂತ್ರಿಸ್ಥಾನದಿಂದ ಕೈಬಿಟ್ಟಿದ್ದರಿಂದ ನನ್ನ ಸ್ವಾಭಿಮಾನಕ್ಕೆ ಭಾರೀ ಧಕ್ಕೆಯಾಯಿತು.
ಅದಕ್ಕೆ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದೆ ಎಂದರು. ಸಿದ್ದರಾಮಯ್ಯ ರಾಜ್ಯ ಕಂಡ ಅನಾಗರಿಕ ಮುಖ್ಯಮಂತ್ರಿ. ಸತತ 40 ವರ್ಷಗಳ ಕಾಲ ಪರಿಶುದ್ಧ ರಾಜಕೀಯ ಮಾಡಿಕೊಂಡು ಬಂದ ತಮ್ಮನ್ನು ಸಂಪುಟದಿಂದ ಕೈಬಿಟ್ಟು ನನ್ನ ಮಗನ ವಯಸ್ಸಿನ ಪ್ರಿಯಾಂಕ ಖರ್ಗೆಯನ್ನು ಮಂತ್ರಿ ಮಾಡಿ ದಲಿತರನ್ನು ಹೊಡೆದ ಮೊದಲ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಪಡೆದುಕೊಂಡಿರುವಿರಿ.
ಇದಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ನೀಡುತ್ತೇನೆ ಎಂದು ಸವಾಲು ಹಾಕಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್, ಮುಖಂಡರಾದ ಫಣೀಶ್, ಬಸವೇಗೌಡ, ಮಂಡಲ ಅಧ್ಯಕ್ಷ ಎಲ್.ಸುರೇಶ್, ಜಿಪಂ ಸದಸ್ಯೆ ರತ್ನಮ್ಮಶ್ರೀಕಂಠಪ್ಪ, ಪುರಸಭೆ ಸದಸ್ಯ ಎಸ್.ಗೋವಿಂದರಾಜನ್ ಇದ್ದರು.