Advertisement
ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಹಲವು ಶಾಸಕರು ಒತ್ತಡ ಹೇರಿದ್ದಾರೆ ಎಂಬುದಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ, ಘಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ್ದಾರೆ. ಸಭೆಯ ನೆಪದಲ್ಲಿ ರೆಸಾರ್ಟ್ ಸೇರಿರುವ ಶಾಸಕರು ಮೋಜು ಮಸ್ತಿಯಲ್ಲಿ ತೊಡಗಿದ್ದು, ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ನಾಯಕರೊಂದಿಗೆ ಚರ್ಚಿಸಿ ಹೋರಾಟ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಕಾಂಗ್ರೆಸ್ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತು ಕೇಳಿ ಬಂದಿದೆ. ಇದಕ್ಕೆಲ್ಲಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.
Related Articles
Advertisement
ಕುಮಾರಸ್ವಾಮಿ ಬದಲಾವಣೆಗೆ ಆಗ್ರಹ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಕಾಂಗ್ರೆಸ್‌ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬದಲಾಯಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿರುವುದನ್ನು ಮುಚ್ಚಿಟ್ಟಿದ್ದಾರೆ. ಇದರಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಾಡಿನ ಜನತೆಗೆ ಹೇಗೆ ಸುಳ್ಳು ಹೇಳುತ್ತಿರುವುದು ಬಯಲಾಗಿದೆ ಎಂದು ಹೇಳಿದರು.
ಕಣ್ಣೀರು ಹಾಕುವರೇ?: ಸಣ್ಣ ಪುಟ್ಟ ವಿಚಾರಗಳಿಗೂ ಕಣ್ಣೀರು ಹಾಕುವ ಸೂಕ್ಷ್ಮ ಮನಸ್ಸಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೈತ್ರಿ ಸರ್ಕಾರದ ಶಾಸಕರೇ ಹೊಡೆದಾಡಿ ಕೊಂಡಿರುವ ಘಟನೆಗೆ ಕಣ್ಣೀರು ಹಾಕುವರೆ?. ಎಚ್.ಡಿ.ದೇವೇಗೌಡರು ಹತ್ತಾರು ಪಕ್ಷಗಳನ್ನು ಒಟ್ಟುಗೂಡಿಸಿ ದೇಶದಲ್ಲಿ ಸರ್ಕಾರ ರಚಿಸುವುದಾಗಿ ಹೇಳುತ್ತಾರೆ. ಕೇವಲ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಸರ್ಕಾರದಲ್ಲೇ ರಾಜ್ಯದಲ್ಲಿ ಇಷ್ಟೆಲ್ಲಾ ರಾದ್ಧಾತ ನಡೆಯುತ್ತಿದೆ. ಇನ್ನು ಹತ್ತಾರು ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸಿದರೆ ದೇಶದ ಅಭಿವೃದ್ಧಿ ಹಳ್ಳ ಹಿಡಿಯಬಹುದು ಎಂದು ವ್ಯಂಗ್ಯವಾಡಿದರು.