Advertisement

ಬಿಜೆಪಿಯ ಸುಳ್ಳಿನ ಸಂಸ್ಕಾರವನ್ನು ಸೋಲಿಸಿ ಸತ್ಯದ ಘನತೆಯನ್ನು ಗೆಲ್ಲಿಸಿದ್ದಾರೆ:Siddaramaiah

03:28 PM Jun 10, 2023 | Team Udayavani |

ಮೈಸೂರು: ಭ್ರಷ್ಟಚಾರ, ದುರಾಡಳಿತ, ಅಭಿವೃದ್ಧಿಹೀನ ಮತ್ತು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ರಾಜ್ಯದ ಜನತೆ ಸೋಲಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

Advertisement

ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ನಡೆದ ಬೃಹತ್ ಕೃತಜ್ಞತಾ ಸಮರ್ಪಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

“ಇದು ನನ್ನ ಕೊನೆ ಚುನಾವಣೆ. ಆದರೆ ನಾನು ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಸೇವೆಯನ್ನು ಮುಂದುವರೆಸುತ್ತೇನೆ. 2013 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ನುಡಿದಂತೆ ನಡೆದು ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ಎಲ್ಲಾ ವರ್ಗಗಳ ಪರವಾಗಿ ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದೆ. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನಾಡಿಗೆ ನೀಡಲಿದೆ. ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಅದನ್ನೇ ನಾನು ಮಾದರಿಯನ್ನಾಗಿ ಇಟ್ಟುಕೊಂಡು ನಾನು ಮೊದಲ ಬಾರಿ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನುಡಿದಂತೆ ನಡೆದೆ ಎಂದರು.

ಮುಖ್ಯಮಂತ್ರಿ ಕುರ್ಚಿ ಸುಖದ ಸುಪ್ಪತ್ತಿಗೆ ಅಲ್ಲ. ಜನರ ಬದುಕನ್ನು ಸುಧಾರಿಸಲು ಸಿಗುವ ಅವಕಾಶ. ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ. ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಘೋಷಿಸಿದ ಬಡವರ-ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವುದು ಅವರಿಗೆ ಬೇಕಾಗಿಲ್ಲ ಎಂದು ಟೀಕಿಸಿದರು.

ಬಿಜೆಪಿ ತನ್ನ ಜಾಯಮಾನದಲ್ಲೇ ಮಾಡದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು

Advertisement

2024 ರಲ್ಲೂ ಗೆಲ್ತೀವಿ-ಬೆಲೆ ಇಳಿಸ್ತೀವಿ: “ಗಗನಕ್ಕೆ ಏರಿರುವ ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಿ” ಎಂದು ಸಭೆಯಲ್ಲಿದ್ದ ರೈತರು ಕೂಗಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, “ರಸಗೊಬ್ಬರ ಬೆಲೆ ಏರಿಸಿರುವುದು ಪ್ರಧಾನಿ ಮೋದಿ ಸರ್ಕಾರ. ಬೆಲೆ ಇಳಿಸಬೇಕಾಗಿರುವುದೂ ಮೋದಿ ಸರ್ಕಾರವೇ. ಆದರೆ ಅವರು ಬೆಲೆ ಇಳಿಸಲ್ಲ. ನಾವು 2024 ರ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುತ್ತೇವೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬರ್ತೀವಿ. ಆಗ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ್, ರಸಗೊಬ್ಬರ ಬೆಲೆಗಳನ್ನು ಇಳಿಸುತ್ತೇವೆ ಎಂದರು. ನೆರೆದಿದ್ದ ಜನ, ನೀವು ಪ್ರಧಾನಿ ಆಗಬೇಕು ಎಂದು ಮುಗಿಲು ಮುಟ್ಟುವಂತೆ ಕೂಗಿದರು.

ಚರ್ಚೆಗೆ ತಲೆ ಕೆಡಿಸಿಕೊಳ್ಳಬೇಡಿ, ಅರ್ಜಿ ಹಾಕಿ: ಬಡವರ-ಮಧ್ಯಮ ವರ್ಗದವರ ಸಂಕಷ್ಟ ಕಡಿಮೆ ಮಾಡಲು ನಾವು ಜಾರಿಗೆ ತಂದ ಯೋಜನೆಗಳನ್ನು, “ಅವರಿಗಾ-ಇವರಿಗಾ” ಎನ್ನುವ ಗೊಂದಲ ಸೃಷ್ಡಿಸುತ್ತಾರೆ. ನೀವು ಗೊಂದಲಕ್ಕೆ ಒಳಗಾಗಬೇಡಿ. ಯೋಜನೆಗಳ ಅನುಕೂಲ ಪಡೆಯಿರಿ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಯತೀಂದ್ರ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಮಾಜಿ ಮಂತ್ರಿಗಳಾದ ಪುಟ್ಟರಂಗಶೆಟ್ಟಿ, ಶಾಸಕರಾದ ಕೃಷ್ಣಮೂರ್ತಿ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಮಾಜಿ ಲೋಕಸಭಾ ಸದಸ್ಯರಾದ ಶಿವಣ್ಣ, ಶಾಸಕರುಗಳಾದ ಗುಂಡ್ಲುಪೇಟೆ  ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ರವಿ ಶಂಕರ್,  ಹರೀಶ್ ಗೌಡ, ಪರಿಷತ್ ಸದಸ್ಯ ನಾಗರಾಜ್ ಯಾದವ್ ಸೇರಿದಂತೆ ಸಾಕಷ್ಟು ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next