Advertisement

ಸಿದ್ದರಾಮಯ್ಯ ನವರಿಗೆ ಶನಿ ಹೆಗಲೇರಿದೆ

05:27 PM Apr 12, 2018 | Team Udayavani |

ಮಧುಗಿರಿ: ಸಿಎಂ ಸಿದ್ದರಾಮಯ್ಯನವರಿಗೆ ಶನಿ ಹೆಗಲೇರಿದ್ದು, ದುರಹಂಕಾರದ ಮಾತುಗಳ ನ್ನಾಡುತ್ತಿದ್ದಾರೆ. ರಾಜಕೀಯ ಗುರುಗಳಾದ ಎಚ್‌.ಡಿ.ದೇವೇಗೌಡರನ್ನೇ ಹೀಯಾಳಿಸುವ ನೀಚ ಬುದ್ಧಿ ಬರಲು ಅವರ ಜಾತಕದಲ್ಲಿನ ಶನಿದೋಷವೇ
ಕಾರಣವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಆಪಾದಿಸಿದರು. ಪಟ್ಟಣದ ಆರ್ಯವೈಶ್ಯ ಸಮುದಾಯದವರನ್ನು ಭೇಟಿ ಮಾಡಿ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ಕೋರಿ ನಂತರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

 ಇಂದು ದೇಶದಲ್ಲೇ ಜನ ಕಾಂಗ್ರೆಸ್‌ನ್ನು ಮನೆಗೆ ಕಳಿಸಿದ್ದಾರೆ. ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಮನೆಗೆ ಕಳಿಸಲು ಮತದಾರರು ತೀರ್ಮಾನಿಸಿದ್ದು, ಜೆಡಿಎಸ್‌ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವೀರಭದ್ರಯ್ಯ ಸಜ್ಜನ ರಾಜಕಾರಣಿ: ಜೆಡಿಎಸ್‌ ಅಭ್ಯರ್ಥಿ ವೀರಭದ್ರಯ್ಯನವರು ಸಜ್ಜನ ರಾಜಕಾರಣಿ. ಇವರನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಕ್ಷೇತ್ರದ ಮತದಾರ ಪಕ್ಷ-ಜಾತಿ ಮೀರಿ ತೀರ್ಮಾನಿಸಿದ್ದಾರೆ. ಅದೇ ರೀತಿ ನಮ್ಮ ಸಮಾಜದ ಮುಖಂಡರೊಂದಿಗೂ ಚರ್ಚಿಸಿದ್ದು, ವರ್ತಕ ಸಮುದಾಯದವರು 5 ವರ್ಷಗಳ ನೋವನ್ನು ಹೇಳಿಕೊಂಡಿದ್ದಾರೆ. ತಾಲೂಕಿನಲ್ಲಿ ಇನ್ನು ಮುಂದೆ ಕಾಂಗ್ರೆಸ್‌ ಆಟ ನಡೆಯಲ್ಲ ಎಂದು ಗುಡುಗಿದರು. 

ಆಣೆ, ಪ್ರಮಾಣ ಮಾಡುವುದನ್ನು ಬಿಡಿ: ಸಿದ್ದರಾಮಯ್ಯ ಪದೇ-ಪದೇ ನಮ್ಮ ವರಿಷ್ಠರ ಕುರಿತು ಆಣೆ-ಪ್ರಮಾಣ ಮಾಡುವುದನ್ನು ಬಿಡಬೇಕು. ನೀವು ಎಲ್ಲಿಂದ ಬಂದವರು ಎಂದು ಮೊದಲು ಅರಿಯಬೇಕು. ಅನುರಾಧಾ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಹುಟ್ಟಿದ ಸಿದ್ದರಾಮಯ್ಯರಿಗೆ ಶನಿ ಹೆಗಲೇರಿದ್ದು, ಎಲ್ಲಿಗೆ ಹೋದರೂ ಜನತೆ ಸೋಲಿನ ಭಾಗ್ಯ ನೀಡಲು ಕಾಯುತ್ತಿದ್ದಾರೆ ಎಂದರು. 

ಕಾಂಗ್ರೆಸ್‌ನ ಬಿ ಟೀಂನ ಡಾ. ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಿದ್ಧರಾಗಿದ್ದಾರೆ. ಇದರಿಂದ ಹತಾಶರಾದ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಧರ್ಮ ಒಡೆಯುವ ಯೋಜನೆಯಿತ್ತಾ ಎಂದು ಪ್ರಶ್ನಿಸಿದ ಅವರು ಧರ್ಮ ಒಡೆದ ನಿಮಗೆ ಧರ್ಮವೇ ಶಾಪವಾಗಿ ಪರಿಣಮಿಸಿದೆ. ಕುಮಾರಸ್ವಾಮಿ ಸಿಎಂ ಆಗುವುದು ಧರ್ಮದಷ್ಟೆ ಸತ್ಯ ಎಂದರು.

Advertisement

ಹುಂಬತನ ಬಿಡಲಿ: ಕುಮಾರಸ್ವಾಮಿ, ಯಡಿಯೂರಪ್ಪ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತುತ್ತಿದ್ದಾರೆ. ನೀವು ಒಂದು ಸುತ್ತು ಹೋಗಿ ಬಂದರೆ ಇಬ್ಬರನ್ನೂ ಸೋಲಿಸುತ್ತೇನೆ ಎಂಬ ಹುಂಬತನ ಬಿಡಬೇಕು. ನೀವು ಚಾಮುಂಡಿ ಕ್ಷೇತ್ರದಲ್ಲಿ ಮನೆ-ಮನೆಗೆ ಸುತ್ತುತ್ತಿರುವ ಮರ್ಮವೇನು ಎಂದರು.

ಜಮೀರ್‌ ಗೆಲುವಿಗೆ ಗೌಡರು ಶ್ರಮಿಸಿದ್ದರು: ಪಕ್ಷಾಂತರಿ ಜಮೀರ್‌ ಅಹಮದ್‌ ಅವರು ಹಿಂದಿನ ಉಪಚುನಾವಣೆಯಲ್ಲಿ ಗೆಲ್ಲಲು ದೇವೇಗೌಡರು ಅವರ ತಾಯಿಗೆ ನೀಡಿದ ಮಾತು ಕಾರಣ. ಅದರಂತೆ ಜಮೀರ್‌ ಗೆಲುವು ಸಾಧಿಸಿದರು. ಆದರೆ ಇಂದು ಪಕ್ಷವನ್ನು ಹಾಗೂ ವರಿಷ್ಠರನ್ನೂ ಬೀದಿಯಲ್ಲಿ ಬೈಯುವಂತಹ ಮಟ್ಟಕ್ಕೆ ಅಹಂಕಾರ ಪ್ರದರ್ಶಿಸುತ್ತಿದ್ದಾರೆ. ಮೂಲೆಗೆ ಸೇರುವ ಸೂಚನೆಯಾಗಿದೆ. ಶರವಣ ಒಬ್ಬ ವ್ಯಾಪಾರಿ ಎಂಬ ಜಮೀರ್‌ ಮಾತಿಗೆ ಪ್ರತಿಕ್ರಿಯಿಸಿದ ಶರವಣ ನಾನು ಅವರಂತೆ ಅವಕಾಶವಾದಿ ರಾಜಕಾರಣಿಯಲ್ಲ
ಎಂದರು.

ಇದೇ ವೇಳೆ ವೈಶ್ಯ ಹಾಗೂ ಬಲಿಜ ಸಮುದಾಯದ ವಿನಯ್‌, ಹರೀಶ್‌ ಸೇರಿದಂತೆ 50ಕ್ಕೂ ಹೆಚ್ಚು ಯುವಕರು ಜೆಡಿಎಸ್‌ ಸೇರಿದರು. ಹಿರಿಯ ಮುಖಂಡ ತುಂಗೋಟಿ ರಾಮಣ್ಣ, ಕಾರ್ಯಾಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಉಪಾಧ್ಯಕ್ಷ ಗಂಗರಾಜು, ಬಿಎಸ್ಪಿ ಅಧ್ಯಕ್ಷ ಶಿವಣ್ಣ, ಯುವ ಮುಖಂಡರಾದ ಎಂ.ಆರ್‌.ಜಗನ್ನಾಥ್‌, ಎಂ.ವಿ.ರುದ್ರಾರಾಧ್ಯ, ಜಿ.ಆರ್‌.ಧನಪಾಲ್‌, ಪುರಸಭೆ ಸದಸ್ಯರಾದ  ದ್ರಶೇಖರ್‌ಬಾಬು, ಲಾಲಾಪೇಟೆ ಮಂಜುನಾಥ್‌, ಮಂಜುನಾಥ್‌ ಆಚಾರ್‌, ಹಮಾಲಿ ಸಂಘದ ಕಾರ್ಯದರ್ಶಿ ಪೋತರಾಜು ಇದ್ದರು.

ನಮ್ಮಲ್ಲೂ ಬಡವರಿದ್ದರೂ ಕಾಂಗ್ರೆಸ್‌ ಸರಕಾರ ಆರ್ಯವೈಶ್ಯ ಸಮುದಾಯಕ್ಕೆ ಮೀಸಲಾತಿ ನೀಡಲು ಹಿಂಜರಿಯಿತು.
ಕ್ಷೇತ್ರದಲ್ಲೂ ಈ ಬಾರಿ ನಮ್ಮ ಸಮಾಜ ಜೆಡಿಎಸ್‌ಗೆ ಬೆಂಬಲಿಸಲಿದೆ. ಶಾಸಕ ರಾಜಣ್ಣ ನವರ ದೌರ್ಜನ್ಯ, ವೀರಣ್ಣನಹಳ್ಳಿ ಪ್ರಕರಣ ಸೇರಿದಂತೆ ಬ್ಯಾಂಕಿನಲ್ಲಿ ನಡೆದಿರುವ ರೈತರ ಹಣ ನುಂಗಿದ ಅವ್ಯವಹಾರಗಳ ದಾಖಲೆ ನಮ್ಮ ಬಳಿಯಿದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ಈ ಬಾರಿ ಜನ ಬದಲಾವಣೆ ಬಯಸಿದ್ದು, ಸಜ್ಜನ ರಾಜಕಾರಣಿ ವೀರಭದ್ರ ಯ್ಯನವರ ಗೆಲುವು ಸುಲಭವಾಗಲಿದೆ.
ಶರವಣ, ವಿಧಾನ ಪರಿಷತ್‌ ಸದಸ್ಯ.

ಏ.17ರಂದು ಪಟ್ಟಣದಲ್ಲಿ ಕುಮಾರಪರ್ವ ಜೆಡಿಎಸ್‌ ಸಮಾವೇಶ ನಡೆಯುತ್ತಿದ್ದು, ಕ್ಷೇತ್ರದ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ತಾಯಂದಿರು ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಾಲೂಕಿನಲ್ಲಿ ಜೆಡಿಎಸ್‌ಗೆ ಸಿಗುತ್ತಿರುವ ಜನಬೆಂಬಲ ನಿಜಕ್ಕೂ ಸಂತಸ ತಂದಿದ್ದು, ಗೆಲುವು ನಮ್ಮದಾಗಲಿದೆ ಎಂಬ ವಿಶ್ವಾಸವಿದೆ. ಅಧಿಕಾರ ಬಂದಾಕ್ಷಣ ಕ್ಷೇತ್ರದ ಶಾಶ್ವತ
ಸಮಸ್ಯೆಗಳಿಗೆ ಮುಕ್ತಿ ನೀಡಿ ಜನರ ಋಣ ತೀರಿಸುತ್ತೇನೆ.  
ಎಂ.ವಿ.ವೀರಭದ್ರಯ್ಯ, ಜೆಡಿಎಸ್‌ ತಾಲೂಕು ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next