Advertisement

CT Ravi ಸುಳ್ಳು ಸುದ್ದಿಯಲ್ಲಿ ಸಿದ್ದರಾಮಯ್ಯ ಅವರೇ ಎ1

12:33 AM Aug 26, 2023 | Team Udayavani |

“ರಾಜ್ಯ ಸರ್ಕಾರ ಸುಳ್ಳು ಸುದ್ದಿ ಹಾಗೂ ಹಾದಿ ತಪ್ಪಿಸುವ ಮಾಹಿತಿ ಹಂಚಿಕೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದೇ ದಿಟವಾದರೆ ಸಿಎಂ ಸಿದ್ದರಾಮಯ್ಯನವರನ್ನೇ ಮೊದಲ ಆರೋಪಿ (ಎ1) ಎಂದು ಪರಿಗಣಿಸಬೇಕು. ಸುಳ್ಳು ಸುದ್ದಿ ಪ್ರಸರಣದ ವಿಚಾರದಲ್ಲಿ ಅವರಷ್ಟು ನಿಷ್ಣಾತರು ಇನ್ನೊಬ್ಬರಿಲ್ಲ. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರಚಿಸಿರುವ ನ್ಯಾ.ನಾಗಮೋಹನ್‌ ದಾಸ್‌ ಸಮಿತಿ ವಿಶ್ವಾಸಾರ್ಹವೇ ಅಲ್ಲ. ಸಿದ್ದರಾಮಯ್ಯ ಏನನ್ನು ಡಿಕ್ಟೇಟ್‌ ಮಾಡುತ್ತಾರೋ, ಆ ವರದಿಯನ್ನು ಈ ಸಮಿತಿ ಕೊಡು ತ್ತದೆ’.ಹೀಗೆಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಉದಯವಾಣಿ’ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಚುನಾವಣಾ ಸೋಲು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಕೆಲ ನೀತಿಗಳನ್ನು ಕಟು ಶಬ್ದಗಳಲ್ಲಿ ವಿಮರ್ಶೆಗೆ ಒಳಪಡಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ….

Advertisement

ಸರ್ಕಾರ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮುಂದಾಗಿದೆ. ಇದು ಬಿಜೆಪಿಯನ್ನು ಟಾರ್ಗೆಟ್‌ ಮಾಡುವ ಉದ್ದೇಶವೇ?
ಸುಳ್ಳು ನೆರೇಟಿವ್‌ ಸೃಷ್ಟಿ ಮಾಡಿ ಜನಾದೇಶವನ್ನೇ ಅಣಕ ಮಾಡಿದ ಪಕ್ಷ ಕಾಂಗ್ರೆಸ್‌. ಇವಿಎಂಗಳ ಬಗ್ಗೆ ಕಾಂಗ್ರೆಸಿಗರು ಇಷ್ಟು ದಿನ ಹರಡಿದ್ದು ಸುಳ್ಳು ಸುದ್ದಿಯಲ್ಲವೇ? ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಎಷ್ಟು ಬಾರಿ ಇವಿಎಂ ಬಗ್ಗೆ ವೃಥಾ ಆರೋಪ ಮಾಡಿಲ್ಲ? ಗಾಂಧಿ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಪಾತ್ರವಿದೆ ಎಂದು ಆರೋಪಿಸಿದ್ದು ಸುಳ್ಳಲ್ಲವೇ? ಸುಳ್ಳು ಸುದ್ದಿ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುವುದೇ ನಿಜವಾದರೆ ಸಿಎಂ ಸಿದ್ದರಾಮಯ್ಯ ಅವರನ್ನು ಮೊದಲ ಆರೋಪಿ ಎಂದು ಪರಿಗಣಿಸಿ ವಿಚಾರಣೆ ಪ್ರಾರಂಭಿಸಬೇಕು. ತಾವು ಗೆದ್ದಾಗ ಪ್ರಜಾಪ್ರಭುತ್ವದ ವಿಜಯ, ಬಿಜೆಪಿ ಗೆದ್ದಾಗ ಇವಿಎಂ ಬಗ್ಗೆ ಅನುಮಾನವಿದೆ ಎಂಬ ಫೇಕ್‌ ನ್ಯೂಸ್‌ ಫ್ಯಾಕ್ಟ್ರಿಯನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರು ಎಷ್ಟು ಬಾರಿ ತೆರೆದಿರಲಿಲ್ಲ? ತಾವು ಹೇಳಿದ ಸುಳ್ಳನ್ನು ಮಾತ್ರ ಜನ ಸತ್ಯವೆಂದು ಭಾವಿಸಬೇಕೆಂಬ ಹಠವನ್ನು ಕಾಂಗ್ರೆಸ್‌ ಹೊತ್ತಂತೆ ಕಾಣುತ್ತಿದೆ.

ವಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಅನಗತ್ಯ ವಿಳಂಬವಾಗುತ್ತಿಲ್ಲವೇ? ಸೋಲಿನ ಬೇಸರವನ್ನು ವರಿಷ್ಠರು ಈ ರೀತಿ ತೀರಿಸಿಕೊಳ್ಳುತ್ತಿದ್ದಾರಾ ?
ಗೆಲ್ಲಬೇಕೆಂಬ ಹಂಬಲ ಎಲ್ಲರಿಗೂ ಇತ್ತು. ಸೋಲನ್ನು ಯಾರೂ ಬಯಸಿರಲಿಲ್ಲ. ಈ ಎರಡು ನೇಮಕ ವಿಚಾರದಲ್ಲಿ ಏಕೆ ವಿಳಂಬವಾಗುತ್ತಿದೆ ಎಂಬ ಸ್ಪಷ್ಟ ಕಾರಣ ಯಾರಿಗೂ ಗೊತ್ತಿಲ್ಲ. ಆದರೆ ನನಗೆ ನಂಬಿಕೆ ಇದೆ. ಈ ವಿಳಂಬದ ಹಿಂದೆ ಒಂದು ಸದುದ್ದೇಶವಿದೆ.

ಚುನಾವಣಾ ಸೋಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿರ್ಗಮನ, ಮುಂದೇನು?
ಪೋಸ್ಟರ್‌ ಅಂಟಿಸುವುದರಿಂದ ಹಿಡಿದು ಬೂತ್‌ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರೆಗೆ ಪಕ್ಷ ಎಲ್ಲವನ್ನೂ ನೀಡಿದೆ. ಯಾವುದೇ ಜವಾಬ್ದಾರಿ ಇರಲಿ, ಇಲ್ಲದಿರಲಿ, ಮತ್ತೂಮ್ಮೆ ಮೋದಿ ಎಂಬ ಧ್ಯೇಯಕ್ಕಾಗಿ ಕೆಲಸ ಮಾಡುತ್ತೇನೆ. ವ್ಯಾವಹಾರಿಕ ಲಾಭದ ನಿರೀಕ್ಷೆ ಇದ್ದಾಗ ಮಾತ್ರ ಅಧಿಕಾರ ಹೋಯ್ತು ಮುಂದೇನು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಯಾವುದೇ ಜವಾಬ್ದಾರಿ ಬದಲಾದರೂ ನಾನ್ನೊಬ್ಬ ಕಾರ್ಯಕರ್ತ ಎಂಬ ಭಾವ ಮಾತ್ರ ಎಂದು ಅಳಿಸುವುದಿಲ್ಲ.

ನಿಮ್ಮ ಪಕ್ಷದ ಶಾಸಕರನ್ನು ಸೆಳೆಯುವ ಡಿ.ಕೆ.ಶಿವಕುಮಾರ್‌ ಪ್ರಯತ್ನಿಸುತ್ತಿದ್ದಾರಲ್ಲವೇ?
ಕಾಲ ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ. ಮಹಾಭಾರತದಲ್ಲಿ ದುರ್ಯೋಧನ ಯುದ್ಧ ಆರಂಭವಾಗುವುದಕ್ಕೆ ಮುನ್ನ ಮೆರೆಯುವಷ್ಟು ಮೆರೆದ. ಕೊನೆಗೆ ಕುರುಕ್ಷೇತ್ರದಲ್ಲಿ ಏನಾಯ್ತು ? ನಡೆಯಲಿ….

Advertisement

ಡಿ.ಕೆ. ಶಿವಕುಮಾರ್‌ ನಿಮಗೆ ಟ್ರೀಟ್ಮೆಂಟ್ ನೀಡಬೇಕು ಎಂದಿದ್ದಾರೆ….
ಪ್ರತಿಯೊಬ್ಬರಿಗೂ ಒಂದೊಂದು ರಾಜಕೀಯ ಸಂಸ್ಕೃತಿಯಿರುತ್ತದೆ. ಅದಕ್ಕೆ ಅನುಗುಣವಾಗಿ ಅವರು ವರ್ತಿಸುತ್ತಾರೆ. ಅಧಿಕಾರ ಕೊಟ್ಟ ಮತದಾರ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುತ್ತಾನೆ. ತೀರ್ಪು ಕೊಡುವಾಗ ಎಲ್ಲವನ್ನು ಗಮನಿಸಿ ಮಸಾಲೆ ಅರೆಯುತ್ತಾನೆ. ತಾನು ಸಾಂವಿಧಾನಿಕ ಹುದ್ದೆಯಲ್ಲಿ ಇದ್ದೇನೆ ಎಂಬುದನ್ನು ಅವರು ಮರೆಯಬಾರದು. ಅಲಂಕರಿಸಿದ ಹುದ್ದೆಗೆ ಗೌರವ ಬರುವಂತೆ ವರ್ತಿಸುವ ಜವಾಬ್ದಾರಿ ಅವರ ಮೇಲಿದೆ.

ದಕ್ಷಿಣ ಭಾರತದಲ್ಲಿ ಈಗ ಯಾವುದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿದಿಲ್ಲ. ಇದೊಂದು ದೊಡ್ಡ ಸೈದ್ಧಾಂತಿಕ ಹಿನ್ನಡೆಯಲ್ಲವೇ ?
ಪಾಂಡಿಚೇರಿ ಬಿಟ್ಟು ದಕ್ಷಿಣ ಭಾರತದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿ ಇಲ್ಲವೆಂಬುದು ನಿಜ. ಆದರೆ ನಾವು ಚುನಾವಣೆಯಲಷ್ಟೇ ಸೋತಿದ್ದೇವೆ. ನಮ್ಮ ಆಶಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಅಧಿಕಾರ ಬಿಜೆಪಿಗೆ ಕೇವಲ ಸಾಧನ. ಅಧಿಕಾರ ಬಲದಿಂದಲೇ ಪಕ್ಷ ಉಳಿಯುತ್ತದೆ ಎಂಬ ಭ್ರಮೆ ಯಾರಿಗೂ ಬೇಡ. ಕರ್ನಾಟಕದಲ್ಲಿ 90ರ ದಶಕದ ನಂತರ ಯಾವುದೇ ಪಕ್ಷ ನಿರಂತರವಾಗಿ ಅಧಿಕಾರವನ್ನು ಉಳಿಸಿಕೊಂಡಿಲ್ಲ. ಪ್ರತಿ ಅವಧಿಗೂ ಜನ ಪರ್ಯಾಯ ಬಯಸುವುದು ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಿರಬಹುದು. ನನ್ನ ಪ್ರಕಾರ ಅತಿ ವಿಶ್ವಾಸವೂ ಬಿಜೆಪಿಯ ಸೋಲಿಗೆ ಒಂದು ಕಾರಣ. ಒಳಮೀಸಲು, ಕಾಂಗ್ರೆಸ್‌ ಸೃಷ್ಟಿ ಮಾಡಿದ ಸುಳ್ಳು ನೆರೇಟಿವ್‌ ಸೇರಿದಂತೆ ಅನೇಕ ಕಾರಣಗಳನ್ನು ನಾವು ಈ ಪಟ್ಟಿಗೆ ಸೇರಿಸುತ್ತಾ ಹೋಗಬಹುದು.

ಪರ್ಯಾಯದ ಬಯಕೆಯನ್ನು ಬದಲಾಯಿಸಲು ಗುಜರಾತ್‌, ಮಧ್ಯ ಪ್ರದೇಶದ ರೀತಿ ಬಿಜೆಪಿಗೆ ಸಾಧ್ಯವಿರಲಿಲ್ಲವೇ ?
ಸೋಲನ್ನು ಒಪ್ಪಿಕೊಳ್ಳುತ್ತಾ ನಾವು ಪರಾಭವದ ಪರಾಮರ್ಶೆ ಮಾಡಿಕೊಳ್ಳುತ್ತಿದ್ದೇವೆ. ಗುಜರಾತ್‌, ಮಧ್ಯ ಪ್ರದೇಶದ ರೀತಿ ದಶಕಗಳ ಕಾಲ ಕರ್ನಾಟಕದಲ್ಲಿ ನಮ್ಮ ಸರ್ಕಾರ ಇರಬೇಕೆಂಬ ಆಸೆ ನಮಗೂ ಇತ್ತು.

ಯಡಿಯೂರಪ್ಪನವರನ್ನು ಅವಧಿಗೆ ಮುನ್ನ ಅಧಿಕಾರದಿಂದ ಕೆಳಗಿಳಿಸಿದ್ದೂ ಸೋಲಿಗೆ ಕಾರಣವಾಯಿತೇ?
ಯಡಿಯೂರಪ್ಪನವರ ಬಗ್ಗೆ ಹುಸಿ ಅನುಕಂಪ ತೋರಿಸುತ್ತಿರುವ ಕಾಂಗ್ರೆಸ್‌ ನಾಯಕರು ಚುನಾವಣಾ ಸಂದರ್ಭದಲ್ಲಿ ಇಂಥದೊಂದು ನರೇಟಿವ್‌ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾದರು. ಈಗ ಸಹಾನುಭೂತಿ ತೋರಿಸುವ ಕಾಂಗ್ರೆಸ್‌ ನಾಯಕರು ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಹೇಗೆ ವರ್ತಿಸಿದ್ದರು ಎಂಬುದನ್ನು ಕೊಂಚ ನೆನಪು ಮಾಡಿಕೊಳ್ಳಿ. ಇದೇ ಸುಜೇìವಾಲ ಯಡಿಯೂರಪ್ಪನವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿರಲಿಲ್ಲವೇ? ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು ಜೆಡಿಎಸ್‌ ಅಥವಾ ಕಾಂಗ್ರೆಸ್‌ ಬೆಂಬಲದಿಂದ ಅಲ್ಲ. ಅವರು ಅಧಿಕಾರಕ್ಕೆ ಬರದಂತೆ ತಡೆಯಲು ಈ ಎರಡೂ ಪಕ್ಷದ ನಾಯಕರು ಹಂತ ಹಂತದಲ್ಲಿ ಪ್ರಯತ್ನ ನಡೆಸಿದರು. ಕರ್ನಾಟಕದಲ್ಲಿ ಬಿಜೆಪಿಯ ಮತಬ್ಯಾಂಕ್‌ ಇನ್ನೂ ಇದೆ ಎಂಬುದನ್ನು ಕಾಂಗ್ರೆಸಿಗರು ಮರೆಯಬಾರದು. ಮುಂಬಯಿ ಕರ್ನಾಟಕದಲ್ಲಿ ನಮಗೆ ಶೇ.3.5, ಕರಾವಳಿಯಲ್ಲಿ ಶೇ.3, ಕಲ್ಯಾಣ ಕರ್ನಾಟಕದಲ್ಲಿ ಶೇ.3.15 ಮತ ಗಳಿಕೆ ಕಡಿಮೆಯಾಗಿದೆ. ಆದರೆ ನಮಗೆ ದೊಡ್ಡ ಹೊಡೆತ ಬಿದ್ದಿದ್ದು ಮಧ್ಯ ಕರ್ನಾಟಕದಲ್ಲಿ. ಅಲ್ಲಿ ನಮಗೆ ಶೇ.8ರಷ್ಟು ಮತ ಕಡಿಮೆಯಾಗಿದೆ. ಆದರೆ ಹಳೆ ಮೈಸೂರು ಭಾಗದಲ್ಲಿ ಶೇ.5, ಬೆಂಗಳೂರಿನಲ್ಲಿ ಶೇ.5.5ರಷ್ಟು ಮತ ಹೆಚ್ಚಳವಾಗಿದೆ.

ಪ್ರಧಾನಿ ಜನಪ್ರಿಯತೆಗೆ ಮೀರಿದ ಆಡಳಿತ ವಿರೋಧಿ ಅಲೆ ಕರ್ನಾಟಕದಲ್ಲಿತ್ತೇ ?
ಪ್ರಧಾನಿಯವರು ಕರ್ನಾಟಕ ಮಾತ್ರವಲ್ಲ, ಎಲ್ಲ ರಾಜ್ಯದ ಚುನಾವಣೆಯನ್ನೂ ಇಷ್ಟೇ ಗಂಭೀರವಾಗಿ ಪರಿಗಣಿಸುತ್ತಾರೆ. ತಮಿಳುನಾಡು, ಕೇರಳದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲೂ ಇಷ್ಟೇ ಪರಿಶ್ರಮ ಹಾಕಿದ್ದರು. ನಾನು ಸಾರ್ವಜನಿಕವಾಗಿ ನಮ್ಮ ದೋಷಗಳನ್ನು ಈ ಹಂತದಲ್ಲಿ ವಿಮರ್ಶೆಗೆ ಒಳಪಡಿಸಲು ಸಿದ್ದನಿಲ್ಲ .

ರಾಜ್ಯ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಆರೋಪದ ಬಗ್ಗೆ ತನಿಖೆ ಆರಂಭಿಸಿದೆಯಲ್ಲ ?
ಕಾಂಗ್ರೆಸ್‌ ಸೃಷ್ಟಿಸಿದ ಈ ಸುಳ್ಳು ಆರೋಪದ ಬಗ್ಗೆ ತನಿಖೆ ನಡೆಸಲು ರಚಿಸಿರುವ ನ್ಯಾ.ನಾಗಮೋಹನ್‌ ದಾಸ್‌ ಸಮಿತಿ ವಿಶ್ವಾಸಾರ್ಹತೆ ಬಗ್ಗೆಯೇ ನನಗೆ ಪ್ರಶ್ನೆಗಳಿವೆ. ಸಿದ್ದರಾಮಯ್ಯ ಏನನ್ನು ಡಿಕ್ಟೇಟ್‌ ಮಾಡುತ್ತಾರೋ, ಅದನ್ನೇ ಈ ಸಮಿತಿ ವರದಿ ರೂಪದಲ್ಲಿ ನೀಡುತ್ತದೆ. ಇದರ ಬದಲು ಕೆಪಿಸಿಸಿಯಿಂದಲೇ ವರದಿ ಪಡೆಯಬಹುದಿತ್ತು. ಇಲ್ಲವಾದರೆ ಸಂಪುಟದ ಸಚಿವರೊಬ್ಬರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಬಹುದಿತ್ತು. ಇದೆಲ್ಲವೂ ಕಾಂಗ್ರೆಸ್‌ನ ಟೂಲ್‌ಕಿಟ್‌ ರಾಜಕಾರಣದ ಭಾಗ.

ಪಾಂಡಿಚೇರಿ ಬಿಟ್ಟು ದಕ್ಷಿಣ ಭಾರತದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿ ಇಲ್ಲವೆಂಬುದು ನಿಜ. ಆದರೆ ನಾವು ಚುನಾವಣೆಯಲ್ಲಷ್ಟೇ ಸೋತಿದ್ದೇವೆ. ನಮ್ಮ ಆಶಯ ವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಅಧಿಕಾರ ಬಿಜೆಪಿಗೆ ಕೇವಲ ಸಾಧನ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next