Advertisement

ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಂತೆ ಸಿದ್ದರಾಮಯ್ಯ ಒತ್ತಾಯ

09:51 AM Oct 26, 2019 | Sriram |

ಬೆಂಗಳೂರು: ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಾಂಬಾರು ಪದಾರ್ಥಗಳನ್ನು ಮುಕ್ತವಾಗಿ ಆಮದು ಮಾಡಿಕೊಳ್ಳುವ ಉದ್ದೇಶದ ಆರ್‌ಸಿಇಪಿ ಒಪ್ಪಂದಕ್ಕೆ ಯಾವುದೇ ಕಾರಕ್ಕೂ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕವಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‌ ಸೇರಿ ದೇಶದ ರೈತಾಪಿ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸುವ ಈ ಒಪ್ಪಂದಕ್ಕೆ ನ.4 ರಂದು ಸಹಿ ಹಾಕಿದ್ದೇ ಆದರೆ ರಾಜ್ಯಾದ್ಯಂತ ಕಾಂಗ್ರೆಸ್‌ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಆರ್‌ಸಿಇಪಿ ಒಪ್ಪಂದ ವಿಚಾರ ಸಾರ್ವಜನಿಕ ಚರ್ಚೆಯಾಗಬೇಕು. ನುರಿತರು, ತಜ್ಞರ ಅಭಿಪ್ರಾಯ ಪಡೆಯಬೇಕು. ಗ್ರಾಮೀಣ ಆರ್ಥಿಕ ಪರಿಣಿತರ ಸಲಹೆ ಸೂಚನೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿಗೆ ಪತ್ರ ಬರೆದು ಸಂಸದರನ್ನು ನಿಯೋಗದಲ್ಲಿ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಆದರೆ, ಸರ್ವಪಕ್ಷ ಸಭೆ ಕರೆದು ಎಲ್ಲರನ್ನೂ ಕರೆದೊಯ್ಯಲಿ. ನಾವೂ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.

ಹಾಲು ಉತ್ಪಾದನೆಯಲ್ಲಿ ಕರ್ನಾಟಕವು ಗುಜರಾತ್‌ ನಂತರ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ನಮ್ಮಲ್ಲಿ 15 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಗಳಿದ್ದು 78 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಹಾಲಿನ ಉತ್ಪನ್ನಗಳನ್ನೂ ತಯಾರಿಸಲಾಗುತ್ತಿದೆ. ಒಂದೂವರೆ ಕೋಟಿ ಜನರು ಹೈನುಗಾರಿಕೆ ಆಶ್ರಯಿಸಿದ್ದಾರೆ. ಅದರಲ್ಲಿ ಹೆಣ್ಣು ಮಕ್ಕಳೇ ಹೆಚ್ಚು. ಇಂತಹ ಸ್ಥಿತಿಯಲ್ಲಿ ಬೇರೆ ದೇಶದ ಹಾಲಿನ ಉತ್ಪನ್ನಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಇಟ್ಟು ಕಡಿಮೆ ಬೆಲೆಗೆ ಸಿಕ್ಕರೆ ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಂತೆ ನಮ್ಮ ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಈಗಾಗಲೇ ನರೇಂದ್ರಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ನಿರುದ್ಯೋಗ, ಉದ್ಯೋಗ ಕಡಿತ ಹೆಚ್ಚಾಗಿ ಜಿಡಿಪಿ ಕುಸಿತ ಕಂಡಿದೆ. ಇಂತಹ ಸಂದರ್ಭದಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.

ಈಗಾಗಲೇ ಚೈನಾದಿಂದ ರೇಷ್ಮೆ ಆಮದು ಮಾಡಿಕೊಂಡು ನಮ್ಮ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಆರ್‌ಸಿಇಪಿ ಒಪ್ಪಂದಿಂದ ರೈತಾಪಿ ಸಮುದಾಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಇದು ರೈತರ ಪಾಲಿನ ಮರಣ ಶಾಸನವಾಗಲಿದೆ ಎಂದು ತಿಳಿಸಿದರು.

ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಜಪಾನ್‌, ವಿಯೆಟ್ನಾಂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹಾಲಿನ ಉತ್ಪನ್ನಗಳು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದಿಸಲಾಗುತ್ತಿದೆ. ಅಲ್ಲಿ ಮಾರುಕಟ್ಟೆ ಇಲ್ಲ ಎಂದು ನಮ್ಮ ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಲಾಗಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು. ಜನಸಾಮಾನ್ಯರೂ ಇದರ ಬಗ್ಗೆ ಪ್ರತಿಭಟನೆ ತೋರಬೇಕು ಎಂದು ಹೇಳಿದರು.

ಆರ್‌ಸಿಇಪಿ ಒಪ್ಪಂದದ ಪ್ರಕಾರ ಸಂಬಂಧಪಟ್ಟ ಗುಂಪಿನ 16 ದೇಶಗಳು ಶೆ.80 ರಿಂದ 90 ರಷ್ಟು ಸರಕುಗಳನ್ನು ಯಾವುದೇ ಆಮದು ಸುಂಕ ಇಲ್ಲದೆ ಕಡಿಮೆ ಆಮದು ಸುಂಕ ತೆತ್ತು ಆಮದು ಮಾಡಿಕೊಳ್ಳಬಹುದಾಗಿದೆ. ಈ ವ್ಯಾಪಾರ ಒಪ್ಪಂದ ಮುಂದಿನ ದಿನಗಳಲ್ಲಿ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯತೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದೊಮ್ಮೆ ಒಪ್ಪಂದ ಆಗುವುದೇ ಆದರೆ ಕೃಷಿ, ತೋಟಗಾರಿಕೆ, ಸಾಂಬಾರು ಪದಾರ್ಥ, ಹಾಲಿನ ಉತ್ಪನ್ನಗಳು, ಔಷಧಗಳು ಅದರಿಂದ ಹೊರಗೆ ಇಡಬೇಕು ಎಂದು ಆಗ್ರಹಿಸಿದರು.

ಆರ್‌ಸಿಇಪಿ ಒಪ್ಪಂದ ಜಾರಿಯಾದರೆ ವಿದೇಶಿ ಉತ್ಪನ್ನಗಳು ನಮ್ಮ ದೇಶೀಯ ಮಾರುಕಟ್ಟೆಯಲ್ಲಿ ರಾರಾಜಿಸಲಿವೆ. ಆಗ, ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಟಾಂಡ್‌ ಅಪ್‌ ಇವೆಲ್ಲವೂ ನೇಪಥ್ಯಕ್ಕೆ ಸರಿಯುತ್ತವೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇ ಒಂದು ಮಾಡಿದ್ದೇ ಒಂದು ರೀತಿ ಆಗುವುದಿಲ್ಲವೇ?
– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ರಿಯಾಕ್ಟ್ ಮಾಡಲ್ಲ
ಎಚ್‌.ಡಿ.ಕುಮಾರಸ್ವಾಮಿಯವರು ಜೆಡಿಎಸ್‌ ಸಹವಾಸ ಸಾಕು ಎಂಬ ಹೇಳಿಕೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕುರಿತು ಕೇಳಿದಾಗ, ನೋ, ಅದೆಲ್ಲಾ ಓಲ್ಡ್‌ ಇಷೂÂಸ್‌, ಮುಗಿದು ಹೋಗಿರುವ ಕಥೆ, ಏನೇನಾಗಿದೆ ಎಂಬುದು ಗೊತ್ತಿದೆ, ನಾನು ರಿಯಾಕ್ಟ್ ಮಾಡುವುದಿಲ್ಲ, ಅದ್ಯಾವುದಕ್ಕೂ ಪ್ರತಿಕ್ರಿಯಿಸುವುದೂ ಇಲ್ಲ ಎಂದು ಸಿದ್ದರಾಮಯ್ಯ ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next