ದಾವಣಗೆರೆ: ”ದೆಹಲಿಯಲ್ಲಿ ಕಾಂಗ್ರೆಸ್ ನವರು ಪ್ರತಿಭಟನೆ ಮಾಡಿ ರಾಜ್ಯದ ಮಾನ ತೆಗೆದಿದ್ದಾರೆ” ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ಕುರಿತು ಕಿಡಿ ಕಾರಿರುವ ಸಿಎಂ ಸಿದ್ದರಾಮಯ್ಯ ”ಕನ್ನಡಿಗರಿಗೆ ಅನ್ಯಾಯ ಆದರೆ ಪ್ರತಿಭಟನೆ ಮಾಡಬಾರದಾ? ಯಡಿಯೂರಪ್ಪ ಬಾಯಿ ಮುಚ್ಚಿಕೊಂಡು ತಲೆ ಅಲ್ಲಾಡಿಸುತ್ತಾರೆಂದರೆ ನಾನೂ ಅಲ್ಲಾಡಿಸಬೇಕಾ?” ಎಂದು ಪ್ರಶ್ನಿಸಿದ್ದಾರೆ.
ಹರಿಹರದ ರಾಜನಹಳ್ಳಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ”ರಾಜ್ಯಕ್ಕೆ ಬರಬೇಕಾದ ಕೇಂದ್ರದ ತೆರಿಗೆ ಬಾಕಿ ವಿಚಾರವಾಗಿ ನಾನು ಸುಳ್ಳು ಹೇಳುತ್ತೇನೆ ಎನ್ನುವುದಾದರೆ ರಾಜಕೀಯ ಬಿಟ್ಟು ಬಿಡುತ್ತೇನೆ” ಎಂದು ಸವಾಲು ಹಾಕಿದರು.
ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕೊಡುತ್ತೇವೆ. ನಮಗೆ ಬರುವುದು 50, 207 ಕೋಟಿ ಮಾತ್ರ. ಇನ್ನುಳಿದಿದ್ದನ್ನು ಕೇಂದ್ರ ಇಟ್ಟುಕೊಳ್ಳುತ್ತದೆ. ನಮ್ಮಿಂದ ನೂರು ರೂಪಾಯಿ ತೆರಿಗೆ ಸಂಗ್ರಹಿಸಿದರೆ ನಮಗೆ ಬರುವುದು 12ರಿಂದ 13 ರೂಪಾಯಿ ಮಾತ್ರ ಬರುತ್ತದೆ. ಅತಿಹೆಚ್ಚು ತರಿಗೆ ಸಂಗ್ರಹಿಸುವ ದೇಶದ ಎರಡನೇ ರಾಜ್ಯ ನಮ್ಮದು. ಅನ್ಯಾಯವಾದರೆ ಸುಮ್ಮನಿರಬೇಕಾ? ಪ್ರತಿಭಟಿಸಬಾರದಾ? ಕನ್ನಡಿಗರಾದ ನೀವೂ ಮಾಧ್ಯಮದವರು ಇದನ್ನ ಒಪ್ಪುತ್ತೀರಾ? ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದರು.
ಬರ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿ ಯಾವುದೇ ಕಾರಣಕ್ಕೂ ನೀರು, ಮೇವಿಗೆ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ. ಬರ ನಿರ್ವಹಣೆಗೆ ಜಿಲ್ಲಾಧಿಕಾರಿ ಖಾತೆಯಲ್ಲಿ 860 ಕೋಟಿ ಇದೆ. ಜನ ಗುಳೇ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ರಾಜ್ಯದ 32 ಲಕ್ಷ ರೈತರಿಗೆ ಎರಡು ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಕೇಂದ್ರ ಸರ್ಕಾರ 5 ತಿಂಗಳಾದರೂ ಒಂದು ರೂಪಾಯಿ ಕೊಟ್ಟಿಲ್ಲ. ಯಡಿಯೂರಪ್ಪ,ವಿಜಯೇಂದ್ರ, ಬೊಮ್ಮಾಯಿ ಯಾರೂ ಮೋದಿ, ಅಮಿತ್ ಶಾ ಜತೆ ಮಾತನಾಡಿ ಬರ ಪರಿಹಾರ ಅನುದಾನ ಕೊಡಿಸಿಲ್ಲ. ಬರೀ ಭಾಷಣ ಹೊಡೆಯುತ್ತಾರೆ. ಟೀಕೆ ಮಾಡುತ್ತಾರೆ ಎಂದು ಆರೋಪಗಳ ಸುರಿಮಳೆ ಗೈದರು.