ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಅವರ ಬಗ್ಗೆ ಗೌರವವಿದೆ. ಆದರೆ ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಬಗ್ಗೆ ಏನು ಮಾತನಾಡಿದ್ದರು ಎಂಬುದನ್ನು ನೆನಪು ಮಾಡಿಕೊಂಡು ನಿರ್ಣಯ ಕೈಗೊಳ್ಳಲಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಆಗ ಮಾತನಾಡಿದ ಪ್ರತಿಯೊಂದು ಶಬ್ದವನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಬೇಕು. ಈಗ ಮುಖ್ಯಮಂತ್ರಿಗಳ ವಿರುದ್ಧದ ಪ್ರಾಸಿಕ್ಯೂಷನ್ ಬಗ್ಗೆ ಹೆಚ್ಚಿಗೆ ಮಾತನಾಡುವದಿಲ್ಲ ಎಂದರು.
ಸಾಕಷ್ಟು ಹೋರಾಟ ಮಾಡಿ ಮುಖ್ಯಮಂತ್ರಿಯಾದವರಿದ್ದಾರೆ. ನಾನು ರಾಜಕೀಯ ದುರುದ್ದೇಶ ಇಟ್ಟುಕೊಂಡು ಮಾತನಾಡುವದಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿದೆ ಎಂದು ರಮೇಶ್ ಹೇಳಿದರು.
ಸಿದ್ದರಾಮಯ್ಯ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ. ಒಂದು ವೇಳೆ ಸಿ ಡಿ ಶಿವು ಬಂದರೆ ಎರಡೇ ದಿನಗಳಲ್ಲಿ ಸರಕಾರ ಬೀಳುತ್ತದೆ. ಅವರು ಮುಖ್ಯಮಂತ್ರಿಯಾದರೆ ರಾಜ್ಯವು ಅಧೋಗತಿಗೆ ಹೋಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲಿ ನಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ನಮ್ಮ ಕೋರ್ ಕಮಿಟಿಯಲ್ಲಿ ನಿರ್ಧಾರ ಮಾಡಿದ್ದೇವೆ. ನಮ್ಮ ಪರವಾಗಿ ಅರವಿಂದ ಲಿಂಬಾವಳಿ ಮಾತ್ರ ಮಾತನಾಡುತ್ತಾರೆ ಎಂದು ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಿದರು.