Advertisement

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

06:58 PM Jun 30, 2024 | Team Udayavani |

ಧಾರವಾಡ : ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಕುರ್ಚಿಗಾಗಿ ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆ ಕೊಡಿಸುತ್ತಿದ್ದಾರೆ. ಹೆಚ್ಚು ಡಿಸಿಎಂ ಸ್ಥಾನ ಸೃಷ್ಟಿಸುವಂತೆ ಒತ್ತಾಯ ಮಾಡುತ್ತಿದ್ದಾರೆ . ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಂಬಾಲಕರಿಂದ ಹೇಳಿಸುತ್ತಿದ್ದಾರೆ. ಸಿಎಂ ಬದಲಾವಣೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಹಿಂಬಾಲಕರಿಂದ ಹೇಳಿಸುತ್ತಿದ್ದಾರೆ . ಇದರಿಂದ ರಾಜ್ಯ ಸರ್ಕಾರದ ದಿಕ್ಕು ದಾರಿ ತಪ್ಪಿದಂತಾಗಿದೆ ಎಂದರು.

ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎನ್ನುತ್ತಾರೆ . ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ತಮ್ಮ ಹಿಂಬಾಲಕರ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ . ಏನೇ ಹೇಳಿದರೂ ಯಾರ ವಿರುದ್ಧವೂ ಕ್ರಮ ಆಗುತ್ತಿಲ್ಲ . ಇಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ ಎಂದರು .

ಒಂದು ವರ್ಷದಲ್ಲಿಯೇ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಹೀಗಾಗಿದೆ . ಗ್ಯಾರಂಟಿ ಕೊಟ್ಟರೂ ಲೋಕಸಭೆಯಲ್ಲಿ ಬಹುಪಾಲು ಬಿಜೆಪಿ ಮುಂದಿತ್ತು , ಕಾಂಗ್ರೆಸ್ ಬಗ್ಗೆ ಜನ ಬೇಸತ್ತಿದ್ದಾರೆ . ಈ ಎಲ್ಲ ಪರಿಣಾಮ ರಾಜ್ಯದ ಆಡಳಿತ ಮೇಲೆ ಆಗುತ್ತಿದೆ . ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತ ನಿಷ್ಕ್ರಿಯಗೊಳ್ಳುತ್ತಿದೆ ಎಂದರು.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ , ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ಕೊಡಲು ಆಗುತ್ತಿಲ್ಲ , ರಾಜ್ಯ ಸರ್ಕಾರದ ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಜನರ ಸಮಸ್ಯೆ ಕಡೆ ಗಮನ ಹರಿಸಬೇಕು . ಬೆಲೆ ಏರಿಕೆ ಮಾಡಿ , ಜನರಿಂದ ಹಣ ಪಡೆದು ಜನರಿಗೆ ಕೊಡುತ್ತಿದ್ದಾರೆ . ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ವಿಫಲ ಮುಖ್ಯಮಂತ್ರಿ ಎಂದು ಕಿಡಿಕಾರಿದರು .

Advertisement

ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬೀಳಿಸುವ ಬಿಜೆಪಿ ಮುಖಂಡರ ಹೇಳಿಕೆ ವಿಚಾರವಾಗಿ ಈ ಕುರಿತು ನಾನು ಮೊದಲು ಪತ್ರಿಕ್ರಿಯೆ ನೀಡಿರಲಿಲ್ಲ , ಈಗಲೂ ಪ್ರತಿಕ್ರಿಯೆಸಲಾರೆ ಎಂದರು .

ಐದು ವರ್ಷ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ . ಜನತೆಯ ಆದೇಶ ಐದು ವರ್ಷ ಇರುತ್ತದೆ . ಐದು ವರ್ಷ ಚೆನ್ನಾಗಿ ಆಡಳಿತ ನಡೆಸಿ ಎಂದು ನಾವು ಹೇಳುತ್ತೇವೆ . ಅವರ ಆಂತರಿಕ ಕಾರಣದಿಂದ ಸರಕಾರ ಬಿದ್ದರೆ ನಾವು ಜವಾಬ್ದಾರರಲ್ಲ, ಆ ಮೇಲೆ ಅದಕ್ಕೆ ಅಪರೇಷನ್ ಕಮಲ ಅಂತಾ ಅವರೇ ಹೇಳುವುದು ಸರಿಯಲ್ಲ. ಆದರೆ ಬಿಜೆಪಿ ಈ ವಿಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ . ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ವೀರಶೈವ ಪದ ತೆಗೆದುಹಾಕುವುದು ಸರಿಯಲ್ಲ, ವೀರಶೈವ ಲಿಂಗಾಯತ ಅಂತಾ ಮೊದಲು ಇತ್ತು . ಈಗ ವೀರಶೈವ ಪದ ತೆಗೆದಿದ್ದಾರೆ . ಅನಗತ್ಯವಾಗಿ ಕಿಚ್ಚು ಹಚ್ಚುವ ಕೆಲಸ ಮಾಡಿದ್ದಾರೆ ಎಂದರು‌.

Advertisement

Udayavani is now on Telegram. Click here to join our channel and stay updated with the latest news.

Next