Advertisement

ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಳ್ಳುವ ಭಯ

11:48 AM Feb 02, 2018 | Team Udayavani |

ಮೈಸೂರು: ಅಧಿಕಾರ ಕಳೆದುಕೊಳ್ಳುವ ಭಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಭಜನೆ ಹಾಗೂ ವಿಷಯಾಂತರದ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.

Advertisement

ನಗರದಲ್ಲಿ ಗುರುವಾರ ನಡೆದ ನಗರ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ನಿಜವಾಗಿಯೂ ಐದು ವರ್ಷಗಳ ಆಡಳಿತದಲ್ಲಿ ಸಾಧನೆ ಮಾಡಿದ್ದರೆ, ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖದಲ್ಲಿ ಅಧಿಕಾರ ಕಳೆದುಕೊಳ್ಳುವ ಭಯ ಆವರಿಸಿದೆ.

ಇದರ ಪರಿಣಾಮ ಜಾತಿ, ಧರ್ಮ, ಕನ್ನಡ ಬಾವುಟದ ವಿಭಜನೆ ಕೈಗೊಂಡು ಈಗ ಜಾತಿಯೊಳಗೆ ಒಳಜಾತಿಯನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ವಿಭಜನೆಯ ರಾಜಕಾರಣವನ್ನೇ ಸಿದ್ಧಾಂತ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಜಿನ್ನಾ ವಾರಸುದಾರರೇ ಹೊರತು, ಗಾಂಧಿ ವಾರಸುದಾರರಾಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಕೌರವರ ಸರ್ಕಾರ: ಸಿಎಂ ಸಿದ್ದರಾಮಯ್ಯ ಹೇಳುವಂತೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕುರುಕ್ಷೇತ್ರ ನಡೆಯಲಿದ್ದು, ಕಾಂಗ್ರೆಸ್ಸಿಗರು ಪಾಂಡವರು ಹಾಗೂ ಬಿಜೆಪಿ ಅವರು ಕೌರವರು ಎಂದಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಅತ್ಯಾಚಾರ ಪ್ರಕರಣಗಳ ಜತೆಗೆ ಭ್ರಷ್ಟಾಚಾರದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿ ಕರ್ನಾಟಕವಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರ ಪಾಂಡವರ ರಾಜ್ಯವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಬಾರಿಯ ಚುನಾವಣೆ ಸೈದ್ಧಾಂತಿಕ ಹೋರಾಟವಾಗಿದ್ದು, ಅಧಿಕಾರ, ಜಾತಿ, ಕುಟುಂಬ ರಾಜಕಾರಣದಲ್ಲಿ ಎಲ್ಲಾ ಪಕ್ಷಗಳು ನಡೆಯುತ್ತಿದ್ದರೆ, ರಾಷ್ಟ್ರಪ್ರೇಮದ ಅಜೆಂಡಾದಲ್ಲಿ ಬಿಜೆಪಿ ನಡೆಯುತ್ತಿದೆ ಎಂದರು. ಸಿದ್ಧರಾಮಯ್ಯ ಯಾವುದೇ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸದಿದ್ದರೂ 2.54 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆಂದು ಟೀಕಿಸಿದರು.

Advertisement

ಸಿಎಂ ಶಕ್ತಿ ಕುಸಿಯುತ್ತಿದೆ: ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ದಿನದಿಂದ ದಿನಕ್ಕೆ ಮೈಸೂರಿನಲ್ಲೇ ಕಡಿಮೆಯಾಗುತ್ತಿದೆ. ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲು ಏನೆಲ್ಲಾ ಹುನ್ನಾರ ನಡೆಸಿದರೂ, ಜೆಡಿಎಸ್‌-ಬಿಜೆಪಿ ಮೈತ್ರಿಯೊಂದಿಗೆ ಪಾಲಿಕೆ ಅಧಿಕಾರಕ್ಕೇರಿದೆ.

ಜ.25ರಂದು ನಡೆದ ಪರಿವರ್ತನಾ ಯಾತ್ರೆ ಸಮಾವೇಶವನ್ನು ಹಾಳು ಮಾಡಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದರೂ, ಇಲ್ಲಿನ ಕಾರ್ಯಕರ್ತರು ಸಮಾವೇಶವನ್ನು ಯಶಸ್ವಿಗೊಳಿಸಿದರು. ಹೀಗಾಗಿ ಫೆ.4ರಂದು ಬೆಂಗಳೂರಿನಲ್ಲಿ ನಡೆಯುವ ಮತ್ತೂಂದು ಸಮಾವೇಶವನ್ನು ಯಶಸ್ಸುಗೊಳಿಸುವಲ್ಲಿ ಮೈಸೂರಿನವರ ಪಾತ್ರವು ಪ್ರಮುಖವಾಗಿರಲಿದೆ

. ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು. ಮಾಜಿ ಸಚಿವ ಎಸ್‌.ಎ.ರಾಮದಾಸ್‌, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್‌.ವಿ.ರಾಜೀವ್‌, ನಂದೀಶ್‌ಪ್ರೀತಂ, ಸತೀಶ್‌, ಎಲ್‌.ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಸಿ.ಬಸವೇಗೌಡ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next