ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎಡಬಿಡಂಗಿ ಹಾಗೂ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಆರೋಪಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ “ತುರ್ತುಪರಿಸ್ಥಿತಿಯ ಕರಾಳ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಅವರು 1975-77ರಲ್ಲಿ ಜೆಪಿ ಆಂದೋಲನದ ಭಾಗವಾಗಿ, ಯುವ ನಾಯಕರಾಗಿ ರಾಜ್ಯದಲ್ಲಿ ಹೋರಾಟ ನಡೆಸಿದ್ದರು. ಆದರೆ, ಜೆಪಿ ಆಂದೋಲನದ ಮೂಲಕ ಯಾವ ಪಕ್ಷದ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಡಿದರೋ ಆ ಪಕ್ಷ ಸೇರಿಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಅಡಿಯಾಳಾಗಿ ಕೆಲಸ ಮಾಡುತ್ತಾ ಜೆಪಿ ಆಶಯಗಳಿಗೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.
ಅಧಿಕಾರ ಇರುವುದೇ ಭ್ರಷ್ಟಾಚಾರ, ಶೋಷಣೆ, ದಬ್ಟಾಳಿಕೆ ಮಾಡಲು ಎನ್ನುವ ಕಾಂಗ್ರೆಸ್ ಪಕ್ಷವನ್ನು ದೇಶಾದ್ಯಂತ ಅಧಿಕಾರದಿಂದ ಹೊರಹಾಕಲು ಸ್ವಾತಂತ್ರ ಪೂರ್ವದಲ್ಲಿ ಹೇಗೆ ನಾವು ಬ್ರಿಟೀಷರು ಬೇಡ ಎಂಬ ಕಹಳೆಯನ್ನು ಊದಿದ್ದೆವೋ ಅದೇ ರೀತಿ ಬ್ರಿಟೀಷರ ದಬ್ಟಾಳಿಕೆ, ಭ್ರಷ್ಟಾಚಾರ ಮತ್ತು ಶೋಷಣೆಯ ಸಂಸ್ಕೃತಿ ಮುಂದುವರಿಸುತ್ತಿರುವ ನವ ಬ್ರಿಟಿಷರಾದ ಕಾಂಗ್ರೆಸ್‌ವರ ಆಡಳಿತ ಬೇಡ ಎನ್ನುವ ಹೋರಾಟ ಮಾಡಬೇಕು.
ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಣಕಹಳೆ ಊದಲಾಗಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತುರ್ತುಪರಿಸ್ಥಿತಿಯ ಕರಾಳ ನೆನಪು ಮಾಡಿಕೊಂಡು ಬ್ರಿಟೀಷರನ್ನೂ ನಾಚಿಸುವ ರೀತಿ ನಡೆದುಕೊಂಡ ಕಾಂಗ್ರೆಸ್ ದೇಶದಲ್ಲಿ ಹುಡುಕಿದರೂ ಕೈಗೆ ಸಿಗಬಾರದು. ಲೋಕಸಭೆ, ವಿಧಾನಸಭೆಯಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಬೇಕು. ಈಗಾಗಲೇ ಆಗುತ್ತಿದೆ.
ಅದೇ ರೀತಿ ಕರ್ನಾಟಕದಲ್ಲೂ ಅದನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಮುಕ್ತ ಭಾರತದ ಮೂಲಕ ದೇಶಕ್ಕೆ ಮತ್ತೆ ಸ್ವಾತಂತ್ರ ತಂದುಕೊಡುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮುಖಂಡರಾದ ಸಿ.ಟಿ.ರವಿ, ರಾಮಚಂದ್ರಗೌಡ, ಬಿ.ಎನ್.ವಿಜಯಕುಮಾರ್, ಎನ್.ರವಿಕುಮಾರ್ ಹಾಜರಿದ್ದರು.
ಸ್ವಾತಂತ್ರ ಹೋರಾಟದ ನೆನಪುಗಳನ್ನು ಹೇಗೆ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೋ ಅದೇ ರೀತಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟ, ಜೆಪಿ ಆಂದೋಲನವನ್ನೂ ಮುಂದಿನ ಪೀಳಿಗೆಗೆ ತಲುಪಿಸಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳಾದ ಬಳಿಕ ಈ ವಿಚಾರಗಳನ್ನು ಶಾಲಾ ಪಠದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ.
-ಅನಂತಕುಮಾರ್, ಕೇಂದ್ರ ಸಚಿವ