ಬೆಂಗಳೂರು: ಹೃದಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆದರು. ಐದು ದಿನಗಳ ಹಿಂದೆ ಸಿದ್ದರಾಮಯ್ಯ ಅವರು ಹೃದಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮಾತನಾಡಿದ ಅವರು, ಡಾ.ರಮೇಶ್, ಡಾ.ನಾರಾಯಣಸ್ವಾಮಿಗೆ ಧನ್ಯವಾದ ಸಲ್ಲಿಸ್ತೆನೆ. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೂ ಕುಟುಂಬದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
2000 ಇಸವಿಯ ಆಗಸ್ಟ್ ನಲ್ಲಿ ಎರಡು ರಕ್ತನಾಳಗಳು ಬ್ಲಾಕ್ ಆಗಿತ್ತು. ದೆಹಲಿ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಸ್ಟಂಟ್ ಹಾಕಿದ್ದರು. ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ಮೊದಲಿನ ರೀತಿಯೇ ಸಂಪೂರ್ಣ ಕೆಲಸ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದರು.
ಆಸ್ಪತ್ರೆಗೆ ಭೇಟಿ ನೀಡಿದ ಅನ್ಯ ಪಕ್ಷದ ನಾಯಕರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ. ಪಕ್ಷಾತೀತವಾಗಿ ಎಲ್ಲರೂ ಬಂದು ನನ್ನ ಆರೋಗ್ಯ ವಿಚಾರಿಸಿದರು. ಅವರೆಲ್ಲರಿಗೂ ಕೂಡ ನಾನು ಧನ್ಯವಾದ ಹೇಳ್ತೇನೆ. ರಾಜಕೀಯಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಹೇಳಿದರು.