ಬಾಗಲಕೋಟೆ: ಅಧಿಕಾರಿಯೊಬ್ಬರ ಬೇಜವಾಬ್ದಾರಿ ಹಾಗೂ ಕಾರ್ಯಭಾರ ಒತ್ತಡದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಕೋಟಿ-ಕೋಟಿ ಅನುದಾನ ಲ್ಯಾಪ್ಸ್ ಆಗಿದ್ದು, ತಡವಾಗಿ ಬಹಿರಂಗಗೊಂಡಿದೆ. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ ಅವರು, ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಬಾದಾಮಿ ಕ್ಷೇತ್ರದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 2.46 ಕೋಟಿ ವಿಶೇಷ ಅನುದಾನ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ತಂದಿದ್ದರು. ಬಾದಾಮಿ, ಕೆರೂರ ಹಾಗೂ ಗುಳೇದಗುಡ್ಡದಲ್ಲಿ ಶಾದಿ ಮಹಲ್ ನಿರ್ಮಾಣ, ಅಲ್ಪ ಸಂಖ್ಯಾತರ ಸಮುದಾಯ ಭವನ ಹೀಗೆ ವಿವಿಧ ಕಾರ್ಯಗಳಿಗೆ ಈ ಯೋಜನೆ ಮಂಜೂರು ಮಾಡಿಸುವ ಜತೆಗೆ, ಸ್ವತಃ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ ಅಹ್ಮದ ಖಾನ್ ಅವರನ್ನೇ ಬಾದಾಮಿಗೆ ಕರೆಸಿ, ಈ ಯೋಜನೆಗಳ ಅನುದಾನ ಘೋಷಣೆ ಮಾಡಿಸಿ, ಬಿಡುಗಡೆಯೂ ಮಾಡಿಸಿದ್ದರು. ಆದರೆ, ಕಳೆದ ಮೇ ನಲ್ಲಿ ನಡೆದ ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ, 2.46 ಕೋಟಿ ಅನುದಾನ ಬಳಕೆ ಮಾಡದೇ, ಸರ್ಕಾರಕ್ಕೆ ಹೋಗುವಂತೆ ಮಾಡಿದ್ದು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಾಧನೆ ಎಂದು ಕೆಲವರು ಟೀಕಿಸಿದ್ದಾರೆ.
ಒಬ್ಬ ಅಧಿಕಾರಿಗೆ ನಾಲ್ಕು ಹುದ್ದೆ: ಈ ಅನುದಾನ ಲ್ಯಾಪ್ಸ್ ಆಗಲು ಪ್ರಮುಖ ಕಾರಣ, ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಯ ನಿಷ್ಕಾಳಜಿ ಎಂಬ ಆರೋಪ ಬಲವಾಗಿ ಕೇಳಿ ಬಂದರೆ, ಇನ್ನೊಂದೆಡೆ ಅವರಿಗಿರುವ ಇಲಾಖೆಗಳ ಹೆಚ್ಚುವರಿ ಕಾರ್ಯಭಾರ ಎಂದು ಹೇಳಲಾಗಿದೆ. ಒಬ್ಬ ಅಧಿಕಾರಿಗೆ ಸಾಮಾನ್ಯವಾಗಿ ಒಂದು ಅಥವಾ ಎರಡು ಇಲಾಖೆಗಳ ಪ್ರಭಾರ ಇರುತ್ತದೆ. ಆದರೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಗಿರುವ ಎಂ.ಎನ್. ಮೇಲಿನಮನಿ ಅವರಿಗೆ ಬರೋಬ್ಬರಿ ನಾಲ್ಕು ಇಲಾಖೆಗಳ ಪ್ರಭಾರ ನೀಡಲಾಗಿದೆ. ಹೀಗಾಗಿ ಕೆಲಸದ ಒತ್ತಡ ಹೆಚ್ಚಾಗಿ, ಅನುದಾನ ಬಳಕೆಯಲ್ಲಿ ಹಿನ್ನಡೆಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹೀಗೆ ಒಟ್ಟು ನಾಲ್ಕು ಹುದ್ದೆಗಳಿಗೆ ಮೇಲಿನಮನಿ ಅವರೇ ಮುಖ್ಯಸ್ಥರಾಗಿದ್ದಾರೆ. ಜಿಲ್ಲೆಯ ನಾಲ್ಕು ಇಲಾಖೆಗಳ ಜತೆಗೆ ಗದಗ ಜಿಲ್ಲೆಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಭಾರ ಹುದ್ದೆಯೂ ಅವರಿಗೇ ಕೊಡಲಾಗಿತ್ತು. ಕಳೆದ ವಾರವಷ್ಟೇ ಗದಗ ಜಿಲ್ಲೆಯ ಪ್ರಭಾರವನ್ನು ಹಿಂಪಡೆಯಲಾಗಿದೆ.
Advertisement
ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಶಾಸಕರಾದ ಬಳಿಕ 13 ತಿಂಗಳಲ್ಲಿ ಸುಮಾರು 921 ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದಾರೆ. ಈ ಅನುದಾನ ಸರಿಯಾಗಿ ಬಳಕೆ ಮಾಡುವುದು ಒಂದೆಡೆಯಾದರೆ, ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸುವ ಕೆಲಸವೂ ಸ್ವತಃ ಸಿದ್ದರಾಮಯ್ಯ ಅವರೇ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗಿದೆ.
Related Articles
Advertisement
ಯಾವ ಅಧಿಕಾರಿಗೂ ಇಷ್ಟು ಪ್ರಭಾರವಿಲ್ಲ: ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿ ಬಿಟ್ಟರೆ ಯಾವುದೇ ಇಲಾಖೆ, ಯಾವ ಅಧಿಕಾರಿಗೂ ಇಲ್ಲದಷ್ಟು ಇಲಾಖೆಗಳ ಪ್ರಭಾರ ಹಾಗೂ ಜವಾಬ್ದಾರಿ ಮೇಲಿನಮನಿ ಅವರಿಗೆ ಕೊಡಲಾಗಿದೆ. ಇದಕ್ಕೆ ಕೆಲ ಕಾರಣಗಳಿವೆ ಎಂದು ಹೇಳುವವರೂ ಇದ್ದಾರೆ. 1 ವರ್ಷದಿಂದ ಇವರೇ ಕೆಲ ಇಲಾಖೆಗಳ ಜವಾಬ್ದಾರಿ ವಹಿಸುತ್ತಿದ್ದಾರೆ.
ಆದೇಶ ಪತ್ರವನ್ನು ಕೊಟ್ಟಿದ್ದರು:
ಬಾದಾಮಿಯಲ್ಲಿ ಅಲ್ಪ ಸಂಖ್ಯಾತರ ಇಲಾಖೆ ಹಾಗೂ ಅಂಜುಮನ್ ಸಂಸ್ಥೆಯಿಂದ ಕಾರ್ಯಕ್ರಮ ಆಯೋಜಿಸಿ, ಇಲಾಖೆಯ ಸಚಿವ ಜಮೀರಅಹ್ಮದ ಖಾನ್ ಅವರ ನೇತೃತ್ವದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಬಾದಾಮಿ ಕ್ಷೇತ್ರಕ್ಕೆ ತಂದ ಒಟ್ಟು ಅನುದಾನದ ಮಾಹಿತಿ ಕೊಡುವ ಜತೆಗೆ ಬಾದಾಮಿ, ಕೆರೂರ ಹಾಗೂ ಗುಳೇದಗುಡ್ಡದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದರ ಕುರಿತ ಆದೇಶ ಪತ್ರವನ್ನು ಸ್ವತಃ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ ಅಹ್ಮದ ಖಾನ್ ಅವರು ಕಳೆದ ಏಪ್ರಿಲ್ 8ರಂದು ಬಾದಾಮಿಯಲ್ಲಿ ಸಮಾಜದ ಪ್ರಮುಖರಿಗೆ ನೀಡಿದ್ದರು. ಆದರೆ, ಮುಂದೆ ಆ ಅನುದಾನ ಲ್ಯಾಪ್ಸ್ ಆಗಿರುವುದು ಕೇಳಿ ಸಿದ್ದರಾಮಯ್ಯ ತೀವ್ರ ಬೇಸರವಾಗುವ ಜತೆಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಬಾದಾಮಿ, ಕೆರೂರ ಹಾಗೂ ಗುಳೇದಗುಡ್ಡದಲ್ಲಿ ಶಾದಿ ಮಹಲ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅಲ್ಪ ಸಂಖ್ಯಾತರ ಇಲಾಖೆಯಿಂದ ಬಿಡುಗಡೆಗೊಂಡ ಅನುದಾನ ಲ್ಯಾಪ್ಸ್ ಆಗಿತ್ತು. ಇದನ್ನು ಗಮನಿಸಿ ಸಿದ್ದರಾಮಯ್ಯ ಸಾಹೇಬರು, ಪುನಃ ಇಲಾಖೆಯ ಸಚಿವರಿಗೆ ಪತ್ರ ಬರೆದು, ಹೊಸದಾಗಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚನೆಯೂ ನೀಡಿದ್ದಾರೆ.• ಹೊಳೆಬಸು ಶೆಟ್ಟರ,ಕಾಂಗ್ರೆಸ್ ಮುಖಂಡ
•ಶ್ರೀಶೈಲ ಕೆ. ಬಿರಾದಾರ