ಕೊಪ್ಪಳ:ಸಿದ್ದರಾಮಯ್ಯ ಸಿಎಂ ಆದಾಕ್ಷಣ, ದೇವರಾಜ ಅರಸು ಕಾರಿನ ಸೀಟಿನಲ್ಲಿ ಕುಳಿತು ಓಡಾಡಿದಾಕ್ಷಣ ಅವರೇನು ದೇವರಾಜ ಅರಸು ಆಗಲು ಸಾಧ್ಯವೇ ಇಲ್ಲ. ಇವರಿಗೆ ಒಂದೇ ಜಾತಿಯ ಮತ ನೀಡಿಲ್ಲ. ಎಲ್ಲ ಜಾತಿಯವರೂ ಮತ ನೀಡಿ ಗೆಲ್ಲಿಸಿದ್ದಾರೆ. ಆದರೆ ಸಿದ್ದು ಒಂದು ಜಾತಿಗೆ ಸೀಮಿತವಾಗಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಆರೋಪಿಸಿದರು.
ಕೊಪ್ಪಳದ ಜೆಡಿಎಸ್ ವಿಭಾಗ ಮಟ್ಟದ ಕೋರ್ ಕಮಿಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಗ್ಗೆ 40 ಪರ್ಸೆಂಟ್ ಆರೋಪ ಮಾಡಿದ್ದ ಕಾಂಗ್ರೆಸ್ ಈಗ 50, 60 ಪರ್ಸೆಂಟ್ ಭ್ರಷ್ಟಾಚಾರ ನಡೆಸಿದೆ. ಒಂದೊಂದು ಹುದ್ದೆಯ ವರ್ಗಾವಣೆಯ ದಂಧೆ, ಭ್ರಷ್ಟಾಚಾರ ಮಿತಿ ಮೀರಿದೆ. ಇವರಿಗೆ ರೈತರ ಬಗ್ಗೆ ಗಮನವಿಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಎಂದರು.
ಹೊಸ ಸರ್ಕಾರ ಬಂದಾಕ್ಷಣ ಆರ್ಥಿಕ ಇಲಾಖೆಗೆ ಆದೇಶ ಮಾಡಿ ಯಾವುದೇ ಹಣ ಬಿಡುಗಡೆ ಮಾಡಬೇಡಿ ಎಂದಿದ್ದಾರೆ. ಇದರಿಂದ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಮೋದಿ ಜನತೆಗೆ 5 ಕೆಜಿ ಅಕ್ಕಿ ಕೊಟ್ಟಿದ್ದಾರೆ. ಅನ್ನಭಾಗ್ಯ ಎನ್ನುವ ಇವರು ಅಕ್ಕಿ ಕೊಡಲಾಗುತ್ತಿಲ್ಲ. ಕಾಂಗ್ರೆಸ್‌ನಲ್ಲೇ ರಾಜಣ್ಣ ಮೂರು ಡಿಸಿಎಂ ಬೇಕೆಂದರೆ, ರಾಯರಡ್ಡಿ ಆರು ಡಿಸಿಎಂ ಬೇಕೆನ್ನುತ್ತಾರೆ. ಸಿದ್ದರಾಮಯ್ಯ ಈಗ ಜಾತಿಗೆ ಸೀಮಿತವಾಗಿದ್ದಾರೆ. ಇವರಿಗೆ ಎಲ್ಲ ಜಾತಿಯ ಜನರು ಮತ ನೀಡಿ ಗೆಲ್ಲಿಸಿದ್ದು ಗಮನವಿಲ್ಲ. ಕಾವೇರಿ ನೀರು ಹರಿಸಲು ಮುಂದಾಗಿದ್ದಾರೆ ಎಂದರು.
28 ಪಕ್ಷಗಳು ಸೇರಿ ದೇಶದಲ್ಲಿ ಇಂಡಿಯಾ ಒಕ್ಕೂಟ ಮಾಡಿಕೊಂಡಿವೆ. ನಿಮ್ಮಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ, ನಿಮಗೆ ಹೆಸರು ಹೇಳಲು ಅರ್ಹತೆ ಇಲ್ಲ. ಆದರೂ ಒಕ್ಕೂಟ ಮಾಡಿಕೊಂಡಿದ್ದೀರಿ. ಪ್ರಪಂಚಕ್ಕೆ ಮೋದಿ ನಾಯಕರಾಗಿದ್ದಾರೆ. ದೇಶಕ್ಕೆ ಮೋದಿ ಬೇಕಾಗಿದ್ದಾರೆ. ಕಾಂಗ್ರೆಸ್ ಧೂಳಿಪಟ ಆಗುತ್ತದೆ. ನಾವು ಬಿಜೆಪಿ ಹಾಗೂ ಕಾಂಗ್ರೆಸ್ ಜತೆಯೂ ಯುದ್ಧ ಮಾಡಿದ್ದೇವೆ, ಪಕ್ಷ ಕಟ್ಟಿದ್ದೇವೆ. ಕಾಂಗ್ರೆಸ್ ತಡೆಯಲು ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದ್ದೇವೆ. ಮೋದಿ ದೇಶಕ್ಕೆ ಅವಶ್ಯ. ರಾಜ್ಯ ಹಾಗೂ ದೇಶ ಉಳಿಸಲು ಪಕ್ಷ ಮೈತ್ರಿ ನಿರ್ಣಯ ಮಾಡಿದೆ. ನಮ್ಮಲ್ಲಿ ಶಾಸಕ, ಸಂಸದ ಹಾಗೂ ಎಂಎಲ್‌ಸಿ ಆಗಲು ಸಾಕಷ್ಟು ಅವಕಾಶಗಳಿವೆ. ಅಲ್ಪಸಂಖ್ಯಾತರು ನಮ್ಮ ಜತೆಗಿದ್ದಾರೆ. ಭವಿಷ್ಯದ ಎಲ್ಲ ಚುನಾವಣೆಗಳಲ್ಲಿಯೂ ಮೈತ್ರಿ ಇದ್ದೇ ಇರುತ್ತದೆ ಎಂದರು.