Advertisement
ಕಾಂಗ್ರೆಸ್ ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ ಹುಸೇನ್ ಅವರು ಬರೆದ ಪತ್ರದ ಸಾರಾಂಶ ಹೀಗಿದೆ….ದೇಶವ್ಯಾಪಿ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಕೋಮು ಧ್ರುವೀಕರಣ ರಾಜಕೀಯದಿಂದ ಕರ್ನಾಟಕವೂ ಹೊರತಾಗಿಲ್ಲ ಎಂಬುದು ತಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಸಾರ್ವಜನಿಕ ಜೀವನದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಸನ್ಮಾನ, ಅಪಮಾನ, ಅವಮಾನ ಹಾಗೂ ವೈಭವೀಕರಣ ಅವಿಭಾಜ್ಯ ಅಂಗ. ರಾಜಕೀಯ ಬದುಕಿನಲ್ಲಿ ಅದು ಬೇಡವೆಂದರೂ ಲಭಿಸುವ ಬುತ್ತಿ. ಅದನ್ನು ಸ್ವೀಕರಿಸುವಾಗ ಹಾಗೂ ತಿರಸ್ಕರಿಸುವಾಗ ವಿವೇಚನೆ ಮುಖ್ಯವಾಗಿರಬೇಕೆ ವಿನಾ ಉದ್ವೇಗವೇ ಪ್ರಧಾನವಾಗಬಾರದು.
Related Articles
Advertisement
ಈ ಹಿಂದೆ ನಮ್ಮದೇ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುವಾಗ ಟಿಪ್ಪು ಜಯಂತಿ ಆಚರಣೆಗೆ ಸರಕಾರಿ ಆದೇಶ ಮಾಡಿದ್ದು ಸರಿಯಷ್ಟೇ. ಆ ಆದೇಶದ ತರುವಾಯ ಅಲ್ಪಸಂಖ್ಯಾತ ಸಮುದಾಯ ರಾಜಕೀಯ ಟೀಕೆಗೆ ಹಾಗೂ ದಾಳಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ತುತ್ತಾಯಿತು. ಅದರ ಮೊದಲ ಝಲಕ್ ಪ್ರಕಟವಾಗಿದ್ದು ಕೂಡಾ ಕೊಡಗು ಜಿಲ್ಲೆಯಲ್ಲಿ. ಟಿಪ್ಪು ಜಯಂತಿ ಆದೇಶ ವಿರೋಧಿಸಿ ಕೊಡಗಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಟ್ಟಪ್ಪ ಎಂಬ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರು. ಆದರೆ ಇದೊಂದು ಕೊಲೆ ಎಂದು ನಂತರ ಬಿಜೆಪಿ ಬಿಂಬಿಸಿದ್ದರಿಂದ ಕರ್ನಾಟಕದ ಇಡಿ ಮುಸ್ಲಿಂ ಸಮುದಾಯ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಯಿತು.
ಏನು ತಪ್ಪು ಮಾಡದ ಮುಸ್ಲಿಂ ವ್ಯಕ್ತಿಗಳನ್ನು ಇಡಿ ಕರ್ನಾಟಕದ ಜನತೆ ಅನುಮಾನದಿಂದ ನೋಡುವಂತಾಯಿತು. ಅದೇ ಜಿಲ್ಲೆಯಲ್ಲಿ ಈಗ ನಡೆಯಬಾರದಂಥ ಘಟನೆ ಸಂಭವಿಸಿಬಿಟ್ಟಿದೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಪಕ್ಷದವತಿಯಿಂದ ಲಕ್ಷಾಂತರ ಜನರನ್ನು ಸೇರಿಸಿ ಪಾದಯಾತ್ರೆ ನಡೆಸಿದರೆ ಬೆಂಗಳೂರಿನಿಂದ ಕೊಡಗು ಜಿಲ್ಲೆಯವರೆಗೆ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಅಪಾಯ ಹೆಚ್ಚಿದೆ. ಸಾಮರಸ್ಯ ಕೆಡಿಸುವ ವ್ಯಕ್ತಿಗಳು ಎಲ್ಲ ಪಕ್ಷ ಹಾಗೂ ಧರ್ಮದಲ್ಲೂ ಇದ್ದಾರೆ. ಕಾಂಗ್ರೆಸ್ ಸರಕಾರ ಅಸ್ಥಿತ್ವದಲ್ಲಿದ್ದಾಗಲೇ ನಾವು ಇಂಥ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿದ್ದೇವೆ. ಈಗ ಇಡಿ ಆಡಳಿತ ವ್ಯವಸ್ಥೆಯೇ ಬಿಜೆಪಿಯ ಕೈಯಲ್ಲಿ ಇರುವಾಗ ನಾವು ಯಾವುದೇ ನಿರ್ಧಾರವನ್ನಾದರೂ ಹತ್ತು ಬಾರಿ ಯೋಚಿಸಿ ತೆಗೆದುಕೊಳ್ಳಬೇಕಾಗುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಕೊಡಗು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಷ್ಟ್ರ ಹಾಗೂ ರಾಜ್ಯಕ್ಕೆ ಪ್ರವಾಸೋದ್ಯಮದಿಂದ ಬರುವ ಆದಾಯ ಹೆಚ್ಚಿದೆ. ಹೀಗಾಗಿ ಇಂಥ ಸ್ಥಳಗಳು ಕೋಮು ದ್ವೇಷದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗದಿರಲಿ, ಅಲ್ಪಸಂಖ್ಯಾತ ಸಮುದಾಯ ಮತ್ತೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂಥ ಸನ್ನಿವೇಶ ನಿರ್ಮಾಣವಾಗದೇ ಇರಲಿ ಎಂಬುದಷ್ಟೇ ನನ್ನ ಕಳಕಳಿ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣಕ್ಕೆ ನಾವು ಮಡಿಕೇರಿ ಚಲೋದಂಥ ಪಾದಯಾತ್ರೆಯ ಮೂಲಕ ಪ್ರತಿಕ್ರಿಯೆ ನೀಡಿದರೆ ಅದರಿಂದ ಕಾಂಗ್ರೆಸ್ ಸಂಘಟನೆಯ ಮೇಲೆ ಹಾಗೂ ಚುನಾವಣಾ ದೃಷ್ಟಿಯಿಂದ ಅಡ್ಡಪರಿಣಾಮವುಂಟಾಗುವ ಸಾಧ್ಯತೆ ಹೆಚ್ಚು. ಎಲ್ಲದಕ್ಕಿಂತ ಹೆಚ್ಚಾಗಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನರು ಇದರಿಂದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಬಿಜೆಪಿಯ ಮತಕ್ರೋಢಿಕರಣ ರಾಜಕೀಯ ಯಜ್ಞಕ್ಕೆ ಇದರಿಂದ ತುಪ್ಪ ಸುರಿದಂತಾಗುತ್ತದೆ. ಹೀಗಾಗಿ ಉದ್ದೇಶಿತ ಅಥವಾ ಚರ್ಚಿತ ಮಡಿಕೇರಿ ಚಲೋ ಪಾದಯಾತ್ರೆಯನ್ನು ಕೈ ಬಿಟ್ಟು, ಅದರ ಬದಲಿಗೆ ಜಾಗೃತಿ ಸಮಾವೇಶ ಆಯೋಜಿಸೋಣ. ಆ ಸಭೆಯಲ್ಲಿ ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆಯನ್ನು ಬಿಚ್ಚಿಡೋಣ. ಕೋಮು ಸೌಹಾರ್ದತೆ ಹಾಗೂ ಅಭಿವೃದ್ಧಿ ಆಧರಿತ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಜನತೆಗೆ ವಿವರಿಸೋಣ. ತಕ್ಷಣದ ಪ್ರತಿಕ್ರಿಯೆಯ ಬದಲು ವಿವೇಚನೆಯಿಂದ ಹೆಜ್ಜೆ ಇಡುವುದೇ ಸೂಕ್ತ ಎಂಬುದು ನನ್ನ ಭಾವನೆಯಾಗಿದ್ದು, ಹಿರಿಯರಾದ ತಾವು ಸೂಕ್ತ ಹಾಗೂ ಕಾಲ ಸಮ್ಮತ ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂದು ನಂಬಿದ್ದೇನೆ ಎಂದು ಹುಸೇನ್ ಪತ್ರದಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.