Advertisement
ಸಂಪುಟ ಸಭೆಯ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಮೊದಲು ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ‘ತುಂಗಭದ್ರಾ ಡ್ಯಾಮ್ ನೀರು ಪೋಲಾಗುತ್ತಿರುವುದನ್ನು ತಡೆಯಲು ಯಶಸ್ವಿಯಾಗಿದ್ದೇವೆ. ರೈತರು ಆತಂಕಕ್ಕೀಡಾಗಿದ್ದರು. ನಾವು ಪರಿಸ್ಥಿತಿ ನಿಭಾಯಿಸುವಲ್ಲಿ ತಜ್ಞರನ್ನು ಬಳಸಿಕೊಂಡು ತುರ್ತು ಕಾರ್ಯಾಚರಣೆ ನಡೆಸಿ ನೀರು ವ್ಯರ್ಥ ವಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ತಿಳಿಸಿದರು.
Related Articles
Advertisement
‘ಎಲ್ಲ ಸಂಪುಟ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರು ನೀಡಿರುವ ಅಕ್ರಮ ಪ್ರಾಸಿಕ್ಯೂಷನ್ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತವೆ. ನನ್ನ ಮೇಲೆ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸರಕಾರ ಬಡವರ ಪರವಾಗಿರುವ ಸರಕಾರ. ಎಲ್ಲ ಗ್ಯಾರಂಟಿ ಜಾರಿ ಮಾಡಿದ್ದೇವೆ. ಅವರು ಗ್ಯಾರಂಟಿ ಗಳಿಗೆ ವಿರುದ್ದವಾಗಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ವಿರೋಧ ಮಾಡಿದ್ದರು. ನಾವು ನಡೆದಂತೆ ನುಡಿದಿದ್ದೇವೆ. ಬಿಜೆಪಿ, ಜೆಡಿಎಸ್ ನವರು ಒಂದಾಗಿ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ತೇಜೋವಧೆಮಾಡಲು ಸಾಧ್ಯವಿಲ್ಲ. ನಾಡಿನ ಜನತೆಯ ಆಶೀರ್ವಾದ ನನ್ನ ಮೇಲೆ, ಪಕ್ಷದ ಮೇಲೆ , ಮುಖಂಡರ ಮೇಲಿದೆ. ಕುಟಿಲ ನೀತಿಯಿಂದ ಸರಕಾರ ಅಸ್ಥಿರ ಗೊಳಿಸುವ ಯತ್ನ ಅವರ ಭ್ರಮೆ. 135+1ಸ್ಥಾನ ನಾವು ಗೆದ್ದಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಿಡಿ ಕಾರಿದರು.
ನನ್ನ ವಿರುದ್ಧ ದೂರು ನೀಡಿದ ತತ್ ಕ್ಷಣ ತರಾತುರಿಯಲ್ಲಿ ರಾತ್ರಿ 10 ಗಂಟೆಗೆ ಶೋಕಾಸ್ ನೋಟಿಸ್ ಸಿದ್ದವಾಗಿತ್ತು. ಲೋಕಾಯುಕ್ತ ದವರು ಶಶಿಕಲಾ ಜೊಲ್ಲೆ, ಎಚ್.ಡಿ.ಕುಮಾರಸ್ವಾಮಿ,ಮುರುಗೇಶ್ ನಿರಾಣಿ, ಜನರ್ದನ ರೆಡ್ಡಿ ಅವರ ಅಕ್ರಮದ ಕುರಿತು ದಾಖಲೆಗಳನ್ನು ನೀಡಿದರೂ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಆದರೆ ಮುಡಾ ಪ್ರಕಣದಲ್ಲಿ ತನಿಖೆ ನಡೆದಿಲ್ಲ, ದಾಖಲೆಗಳೇ ಇಲ್ಲದೆ ಇದ್ದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಸ್ವತಂತ್ರ ಬುದ್ದಿಯಿಂದ ಕೊಟ್ಟಿಲ್ಲ. ಬಿಜೆಪಿಯವರ ಮಾತು ಕೇಳಿ ನೀಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಕಿಡಿ ಕಾರಿದರು. ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಅವರೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.
ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ : ಡಿಸಿಎಂ
‘ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟ ನಮ್ಮ ಮುಖ್ಯಮಂತ್ರಿಗಳ ಬೆನ್ನಿಗೆ ನಿಲ್ಲಲಿದೆ. ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಲಾಗಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ. ಇದರ ಜತೆಗೆ ರಾಜಕೀಯವಾಗಿಯೂ ಜನರ ಮಧ್ಯೆ ಹೋರಾಟ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೋರಾಟದ ಕುರಿತು ಸ್ಪಷ್ಟಪಡಿಸಿದರು.