Advertisement

ಮೇಕೆದಾಟು: ಸಿದ್ದರಾಮಯ್ಯ ಸುಳ್ಳುಗಳ ಸರಮಾಲೆ ಸಿಡಿಸಿದ್ದಾರೆ: ಸಿ.ಟಿ. ರವಿ

08:36 PM Jan 03, 2022 | Team Udayavani |

ಬೆಂಗಳೂರು: ಮೇಕೆದಾಟು ಯೋಜನೆಗೆ ಸಿ.ಟಿ. ರವಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳುಗಳ ಸರಮಾಲೆ ಸಿಡಿಸಿದ್ದಾರೆ.

Advertisement

ನಾನು ಯಾವಾಗ ವಿರೋಧ ಮಾಡಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ ಸುದೀರ್ಘ‌ ಟ್ವೀಟ್‌ ಮಾಡಿರುವ ಅವರು, ವಿರೋಧ ಪಕ್ಷದ ನಾಯಕರು, ಚಾಮರಾಜನಗರದಲ್ಲಿ ಭಾನುವಾರ ಮಾತನಾಡುವ ವೇಳೆ ಸುಳ್ಳುಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದಾರೆ.

ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ 1968 ರಲ್ಲೇ ಕಾಂಗ್ರೆಸ್‌ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದೀರಿ. ಹಾಗಾದರೆ ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ನಡೆಸುತ್ತಿತ್ತು? ಆ ನಂತರವು 40 ವರ್ಷಗಳ ಕಾಲ ರಾಜ್ಯವಾಳಿದ ನಿಮ್ಮ ಕಾಂಗ್ರೆಸ್‌ ಪಕ್ಷ ಯಾಕೆ ಮೇಕೆದಾಟು ಯೋಜನೆ ಜಾರಿಗೊಳಿಸಲಿಲ್ಲ? ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ನಾನು ಹೇಳಿದ್ದೇನೆ.

ನಿಮ್ಮದೇ ಪಕ್ಷದ ಸರ್ಕಾರ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಠಾನ ಮಾಡಲಿಲ್ಲ? ಇದಕ್ಕೆ ನೀವು ಉತ್ತರ ಕೊಡಬೇಕಲ್ಲವೇ? ಜನರಿಗೆ ತಪ್ಪು ಮಾಹಿತಿ ನೀಡಿ ಅವರ ದಿಕ್ಕು ತಪ್ಪಿಸುವುದೇ ನಿಮ್ಮ ಕಾಯಕವಾಗಿದೆ. ಈಗಾಗಲೇ ಕೇಂದ್ರದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಗೆ ತಾತ್ವಿಕ ಅನುಮೋದನೆ ಕೊಟ್ಟಿರುವುದನ್ನು ಯಾಕೆ ಜನರ ಎದುರು ಹೇಳದೇ ಮರೆಮಾಚಿದಿರಿ? ಇದೇ ಅಲ್ಲವೇ ನಿಮ್ಮ ಸುಳ್ಳಿನ ರಾಜಕೀಯದ ಮೇಲಾಟ? ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು ಎನ್ನುವ ರಾಜಕೀಯ ಕುಟಿಲ ನೀತಿ ನಿಮ್ಮದು, ನಿಮ್ಮ ಪಕ್ಷದ್ದು ಎಂಬುದು ಸತ್ಯವಿದಿತ. ನೀವು ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಜನರಿಗೆ ಸುಳ್ಳುಗಳ ಸರಮಾಲೆ ಪೋಣಿಸುತ್ತಾ ಜನರನ್ನು ದಿಕ್ಕು ತಪ್ಪಿಸಲು ಪಾದಯಾತ್ರೆ ಮಾಡಲು ಹೊರಟಿದ್ದೀರಿ.

ಇದನ್ನೂ ಓದಿ:ಅವರಿಬ್ಬರು ಅವಳಿ-ಜವಳಿ; ಆದರೆ ಹುಟ್ಟಿದ್ದು ಬೇರೆ- ಬೇರೆ ವರ್ಷದಲ್ಲಿ!

Advertisement

ತಮಿಳುನಾಡಿನಲ್ಲಿ, ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ಸೇ ಅಧಿಕಾರದಲ್ಲಿದ್ದಾಗಲೂ ಯೋಜನೆಯ ಬಗ್ಗೆ ತುಟಿಬಿಚ್ಚದವರು ನಿಮ್ಮ ನಾಯಕರು ಬಗ್ಗೆ ಸ್ವಲ್ಪ ಜನರಿಗೂ ತಿಳಿಸಿ ಸಿದ್ದರಾಮಯ್ಯನವರೇ? ನಿಮ್ಮ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಈ ನಿರ್ಧಿಷ್ಟ ಯೋಜನೆಗೆ ಏಕೆ ವಿರೋಧ ಮಾಡುತ್ತಿದ್ದಾರೆ? ನಿಮ್ಮ ಪಕ್ಷ ಬೆಂಬಲದ ಡಿಎಂಕೆ ಸರ್ಕಾರ ಆಡಳಿತ ನಡೆಸುತ್ತಿದೆ. ಮೇಕೆದಾಟು ಯೋಜನೆಗೆ ಅಡ್ಡಿಯಿಲ್ಲ ಎಂದು ಅವರಿಂದ ಒಂದು ಹೇಳಿಕೆ ಕೊಡಿಸಿ. ಆಗ ಕಾಂಗ್ರೆಸ್‌ ಬಂಡವಾಳ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಒಂದು ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಯೋಜನೆ ಪೂರ್ಣಗೊಳ್ಳಲು 54 ವರ್ಷ ಬೇಕೆ? ಸುಳ್ಳಿಗೂ ಒಂದು ಮಿತಿ ಇರಬೇಕು. ಇದೆಲ್ಲಾ ಚುನಾವಣೆ ಗಿಮಿಕ್‌ ಎಂದು ಜನರಿಗೂ ಗೊತ್ತು. ನಿಮ್ಮ ಕಪಟ ರಾಜಕೀಯ ನಾಟಕ ಜನರಿಗೆ ಅರ್ಥವಾಗುತ್ತಿದೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡದೇ ಸತ್ಯ ಹೇಳಿ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಕ್ರಿಯ ರಾಜಕೀಯಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ. ನಾನೂ ಸಹ ಮೇಕೆದಾಟು ಯೋಜನೆ ಸೇರಿದಂತೆ ಯಾವುದೇ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಚಾರವಾಗಿ ರಾಜಕೀಯ ಮಾಡಬಾರದು ಎಂದು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲೂ ಹೇಳಿದ್ದೇನೆ. ನಾವು ನೀರಿನ ವಿಷಯದಲ್ಲಿ ನಿಮ್ಮ ರೀತಿ ರಾಜಕೀಯ ಮಾಡುತ್ತಿಲ್ಲ. ಈಗ ನೀವು ಪಾದಯಾತ್ರೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕನ್ನಡಿಗರಿಗೂ, ತಮಿಳುನಾಡಿನ ಜನರ ಮನಸ್ಸಿನಲ್ಲಿ ವೈಷಮ್ಯಕ್ಕೆ ಕಾರಣವಾಗುವ ಕಾರ್ಯಕ್ಕೆ ಮುಂದಾಗಿರುವು ನಾಚಿಕೆಗೇಡಿನ ವಿಷಯ ಎಂದು ಸಿ.ಟಿ. ರವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next