Advertisement

ದೇವರಾಜ ಅರಸು ಕಾರಲ್ಲಿ ಸಿದ್ದು ಸವಾರಿ

06:00 AM Aug 21, 2018 | |

ಬೆಂಗಳೂರು: ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ಪ್ರಯಾಣ ಮಾಡಿ ಖುಷಿ ಪಟ್ಟರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮ ದಿನದ ಅಂಗವಾಗಿ ಕೆಪಿಸಿಸಿ ಕಚೇರಿಗೆ ದೇವರಾಜ್‌ ಅರಸು ಬಳಸುತ್ತಿದ್ದ ಕಾರು ಬಂದಿತ್ತು. ಸಮಾರಂಭ ಮುಗಿದ ನಂತರ ಕೆಪಿಸಿಸಿ ಕಚೇರಿಯಿಂದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ಕೆಂಪು ದೀಪದ ಸೈರನ್‌ ಅಳವಡಿಸಿರುವ ಕರಿ ಬಣ್ಣದ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ತೆರಳಿ ಅರಸು ಕಾರಿನ ಗತ್ತು ಅನುಭವಿಸಿದರು. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತ್ರ ಆ ಕಾರಿನಲ್ಲಿ ಪ್ರಯಾಣಿಸದೇ ದೂರ ಉಳಿದರು.

ದೇವರಾಜ ಅರಸು ಅವರು 1978 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹೊಸ ಕಾರು ಖರೀದಿಸಿದ್ದರು. ನಂತರದ ವಿದ್ಯಮಾನಗಳಲ್ಲಿ ಅರಸು ಕಾಂಗ್ರೆಸ್‌ ಎಂಬ ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದರು. 1980 ರಲ್ಲಿ ಲೋಕಸಭೆಗೆ ಚುನಾವಣೆ ನಡೆದಾಗ ಅರಸು ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರಿಂದ ಅರಸು ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲು ಅನುಭವಿಸಿತು. ಆಗ ಅರಸು ಜೊತೆಗಿದ್ದ ಶಾಸಕರೆಲ್ಲ ಆರ್‌. ಗುಂಡೂರಾವ್‌ ಜತೆಗೂಡಿ ಅರಸು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ  ಕೆಳಗಿಳಿಸಿದರು. ಗುಂಡೂರಾವ್‌ ಮುಖ್ಯಮಂತ್ರಿಯಾದರು.

ಮುಖ್ಯಮಂತ್ರಿಯಾದ ಮೇಲೆ ಗುಂಡೂರಾವ್‌ ಅವರು ಅರಸು ಬಳಸುತ್ತಿದ್ದ ಕಾರು ಬಳಸುವುದಿಲ್ಲ ಎಂದು ಹೇಳಿ ಕಾರು ಹಾಗೂ ಅರಸು ವಾಸವಾಗಿದ್ದ ಬಾಲಬ್ರೂಹಿ ಅತಿಥಿಗೃಹ ಎರಡರಿಂದಲೂ ದೂರ ಉಳಿದಿದ್ದರು. ನಂತರದ ದಿನಗಳಲ್ಲಿ ಅರಸು ಬಳಸಿದ್ದ ಕಾರು ಸರ್ಕಾರಿ ಗೋದಾಮಿನಲ್ಲಿ ಇಡಲಾಗಿತ್ತು. ಅದನ್ನು ಗಮನಿಸಿದ ಅರಸು ಅಭಿಮಾನಿ ಉದ್ಯಮಿ ಮಹದೇವು ಎಂಬುವರು 13 ಲಕ್ಷ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು.

ನಂತರ ಪ್ರತಿ ವರ್ಷ ದೇವರಾಜ ಅರಸು ಅವರ ಜನ್ಮ ದಿನದ ಪ್ರಯುಕ್ತ ವಿಧಾನಸೌಧಕ್ಕೆ ತಂದು ವಾಪಸ್‌ ತೆಗೆದುಕೊಂಡು ಹೋಗುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಸರ್ಕಾರ ಬಯಸಿದರೆ ಅದನ್ನು ಸರ್ಕಾರಕ್ಕೆ ನೀಡಲು ಸಿದ್ಧನಿದ್ದೇನೆ. ಆದರೆ ಸರ್ಕಾರ ಆ ಕಾರನ್ನು ದೇವರಾಜ ಅರಸರ ಸ್ಮರಣೆಗಾಗಿ ಸಂರಕ್ಷಿಸಬೇಕು ಎಂದು ಮಹದೇವು ಹೇಳಿದರು.

Advertisement

ಅಂದು ಅರಸು ಅವರು ಬಳಸಿದ್ದ ಕಾರನ್ನು ಗುಂಡೂರಾವ್‌ ಬಳಸಿರಲಿಲ್ಲ. ಸೋಮವಾರ ಕೆಪಿಸಿಸಿ ಕಚೇರಿ ಬಳಿ ಬಂದ ಕಾರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಸಹ ಕೂರಲಿಲ್ಲ ಎಂಬುದು ಕಾಕತಾಳೀಯ.

Advertisement

Udayavani is now on Telegram. Click here to join our channel and stay updated with the latest news.

Next