ಕೊಪ್ಪಳ: ತಾಲೂಕಿನ ವನ ಬಳ್ಳಾರಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಹನುಮಂತಪ್ಪ ಅವರ ಸಹೋದರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದ ರಾಮಯ್ಯ ವಧು-ವರರಿಗೆ ಶುಭ ಕೋರುವ ಜತೆಗೆ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು.
ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ, ಗಂಗಾವತಿ ಕ್ಷೇತ್ರದ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಕ್ಷೇತ್ರದ ಅಮರೇಗೌಡ ಬಯ್ನಾಪುರ, ಕನಕಗಿರಿ ಕ್ಷೇತ್ರದ ಶಿವರಾಜ ತಂಗಡಗಿ, ಯಲಬುರ್ಗಾ ಕ್ಷೇತ್ರದ ಬಸವ ರಾಜ ರಾಯರಡ್ಡಿ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿ ಕೊಡಬೇಕು. ಆಗ ಮಾತ್ರ ನೀವೆಲ್ಲರೂ ನನಗೆ ಆಶೀರ್ವಾದ ಮಾಡಿದಂತೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ಸಿಎಂ ನಾನೇ ಎನ್ನುವ ಸಂದೇಶವನ್ನೂ ನೀಡಿದರು.
ಅಹಿಂದ ಮತದಾರರ ಹೆಸರೇ ಹೆಚ್ಚು ಡಿಲಿಟ್ ಮತದಾರರ ಮತಗಳನ್ನು ಬಿಜೆಪಿ ಕಳ್ಳತನ ಮಾಡುವ ಕೆಲಸ ಮಾಡಿದೆ. ಅಲ್ಪಸಂಖ್ಯಾತರು, ಅಹಿಂದ ವರ್ಗದ ಮತಗಳೇ ಹೆಚ್ಚು ಡಿಲಿಟ್ ಆಗಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿದರು.
ತಾಲೂಕಿನ ವನ ಬಳ್ಳಾರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಗೆ ಚಿಲುಮೆ ಎನ್ನುವ ಸಂಸ್ಥೆಗೆ ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಡಲಿ, ಅದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ ಚಿಲುಮೆ ಸಂಸ್ಥೆ ಖಾಸಗಿ ಜನರನ್ನು ಬಿಎಲ್‌ಒಗಳನ್ನಾಗಿ ನೇಮಕ ಮಾಡಿಕೊಂಡಿದೆ. ಕಾನೂನು ಪ್ರಕಾರ ಖಾಸಗಿಯವರನ್ನು ನೇಮಕ ಮಾಡಿಕೊಳ್ಳಲು ಬರಲ್ಲ. ಬಿಜೆಪಿಗೆ ಸೋಲುವ ಭಯ ಶುರುವಾಗಿದೆ. ಹಾಗಾಗಿ 28 ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲಿಟ್ ಮತ್ತು ಸೇರ್ಪಡೆ ಮಾಡಿದ್ದಾರೆ ಎಂದರು.
ಒಂದೊಂದು ಕ್ಷೇತ್ರದಲ್ಲಿ 50-60 ಸಾವಿರ ಜನರ ಹೆಸರು ಡಿಲಿಟ್ ಮಾಡಿದ್ದಾರೆ. ಅವರಿಗೆ ಮತ ಹಾಕಲ್ಲ ಎನ್ನುವವರನ್ನು ನೋಡಿ ಡಿಲಿಟ್ ಮಾಡಿದ್ದಾರೆ. ಅಹಿಂದ ವರ್ಗದವರ ಮತಗಳು ಹೆಚ್ಚು ಡಿಲಿಟ್ ಆಗಿವೆ. ಅದಕ್ಕೆ ನಾವು ಇದನ್ನು ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯಿಸಿದ್ದೇವೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ. ಆದರೆ ಇದಕ್ಕೆ ಅವರು ಉತ್ತರ ಕೊಡುತ್ತಿಲ್ಲ. ಅವರ ಇಲಾಖೆಯಲ್ಲಿ ಅಕ್ರಮ ನಡೆದರೆ ಅದಕ್ಕೆ ಜವಾಬ್ದಾರರು
ಯಾರು? ಅವರೇ ಉತ್ತರ ಕೊಡಬೇಕಲ್ಲವೇ? ಶ್ರೀರಾಮುಲು ಒಬ್ಬ ಪೆದ್ದ. ಅವನ ಸವಾಲಿಗೆ ನಾನು ಉತ್ತರ ಕೊಡಲ್ಲ ಎಂದರು.