ಬೆಂಗಳೂರು:ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳು ಮಾಡಿ ಕಾರ್ಪೊರೇಟ್ ಬಂಡವಾಳಿಗರ ಕಾಲ ಕೆಳಕ್ಕೆ ಅ ತಳ್ಳಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಸಾಧನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಎಂಟು ವರ್ಷಗಳಲ್ಲಿ ಮೋದಿಯವರು ಹೇಳಿದ ಸುಳ್ಳುಗಳಿಗೆ ಲೆಕ್ಕವೇ ಇಲ್ಲ. ಅವುಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸೇರಿದೆ ಎಂದು ದೂರಿದರು.
ನ್ಯಾಷನಲ್ ಸ್ಯಾಂಪಲ್ ಸರ್ವೆಯವರ ಪ್ರಕಾರ 2015-16 ರಲ್ಲಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 96,703 ರೂ.ಎಂದು ಅಂದಾಜಿಸಲಾಗಿತ್ತು.
2022 ರಲ್ಲಿ ಇದು ದ್ವಿಗುಣಗೊಳ್ಳಬೇಕಾದರೆ 2015-16 ರ ಬೆಲೆಗಳಲ್ಲಿ ಲೆಕ್ಕ ಹಾಕಿದರೆ ಸರಾಸರಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 1,72,694 ರೂ. ಆಗಬೇಕಿತ್ತು. ಇಂದಿನ ಬೆಲೆಗಳಲ್ಲಿ ಹಣದುಬ್ಬರವನ್ನು ಸೇರಿಸಿ ಲೆಕ್ಕ ಹಾಕಿದರೆ 2.50 ರಿಂದ 2.80 ಲಕ್ಷ ರೂ. ಆಗಬೇಕಿತ್ತು. 2019-20 ರಲ್ಲಿ ಎನ್‌ಎಸ್‌ಎಸ್‌ಒ ಹಲವು ಆಯಾಮಗಳಲ್ಲಿ ಸಮೀಕ್ಷೆ ಮಾಡಿದ್ದು ಮನಮೋಹನಸಿಂಗ್ ಅವರ ಯುಪಿಎ ಅವಧಿಯಲ್ಲಿ ಕೃಷಿಯ ಜಿವಿಎ ಬೆಳವಣಿಗೆ ದರ ಸರಾಸರಿ ಶೇ. 4.6 ಕ್ಕಿಂತ ಹೆಚ್ಚಿಗೆ ಇತ್ತು. ಮೋದಿಯವರ ಕಾಲದಲ್ಲಿ ಕೇವಲ ಶೇ. 3.3 ರಷ್ಟಿದೆ ಎಂದು ಟೀಕಿಸಿದ್ದಾರೆ.
ಇಷ್ಟೆಲ್ಲ ಆದರೂ ಮೋದಿಯವರ ಸರ್ಕಾರ ಜಾಹಿರಾತು ಕೊಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ರೈತರು ತಮ್ಮ ಮನೆಗಳಲ್ಲಿನ ಚಿನ್ನವನ್ನು ಅಡ ಇಟ್ಟು ಸಾಲ ತರುತ್ತಿದ್ದಾರೆ. ಬೆಳೆ ಬಂದಾಗ ಬೆಲೆ ಸಿಗುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದಿಂದಾಗಿ ಕಳಪೆ ಔಷಧ, ಬೀಜ, ಗೊಬ್ಬರ ಮಾರುಕಟ್ಟೆಯಲ್ಲಿ ತುಂಬಿದೆ. ಇದನ್ನು ನಿಯಂತ್ರಣ ಮಾಡುವ ಶಕ್ತಿಯಾಗಲಿ, ಉದ್ದೇಶವಾಗಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಆರೋಪಿಸಿದ್ದಾರೆ.