Advertisement

ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್‌ನವರು ಮೂಲ ಭಾರತದವರೇ?’ಹೇಳಿಕೆಗೆ ಆಕ್ರೋಶ

01:57 AM May 28, 2022 | Team Udayavani |

ಬೆಂಗಳೂರು: “ಆರೆಸ್ಸೆಸ್‌ನವರು ಮೂಲ ಭಾರತದವರೇ? ಅವರು ದ್ರಾವಿಡರೇ?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿ ರುವುದು ಬಿಜೆಪಿ ಮುಖಂಡರನ್ನು ಸಿಟ್ಟಿಗೆಬ್ಬಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಸಚಿವ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದು, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

Advertisement

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನೆಹರೂ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, “ದ್ರಾವಿಡರು ಈ ದೇಶದವರು. ಆರೆಸ್ಸೆಸ್‌ನವರು ಎಲ್ಲಿಯವರು ಎಂದು ಪ್ರಶ್ನಿಸುತ್ತ ಹೋದರೆ ಏನಾಗುತ್ತದೆ ಗೊತ್ತೇ? ಅದಕ್ಕೆ ಚರಿತ್ರೆಯನ್ನು ಕೆದಕಲು ಹೋಗಬಾರದು. ಈ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಹೇಳಿದ್ದಾರೆ.

“ಇತಿಹಾಸ ಕೆದಕಿದರೆ ಸಾಕಷ್ಟು ಹೇಳಬೇಕಾ ಗುತ್ತದೆ. ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸ ಲಾರರು ಎಂದು ಡಾ| ಅಂಬೇಡ್ಕರ್‌ ಹೇಳಿದ್ದರು. ಆರೆಸ್ಸೆಸ್‌ನವರಿಗೆ ನೈಜ ಚರಿತ್ರೆಯ ಬಗ್ಗೆ ಭಯ ಇದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನೈಜ ಚರಿತ್ರೆಯನ್ನು ದೇಶದ ದುಡಿಯುವ ವರ್ಗಗಳು, ಶ್ರಮಿಕರು ಮತ್ತು ದ್ರಾವಿಡರು ಅರಿತರೆ ಏನಾಗಬಹುದು ಎನ್ನುವುದು ಆರೆಸ್ಸೆಸ್‌ ನವರಿಗೆ ಗೊತ್ತಿದೆ. ಹೀಗಾಗಿಯೇ ಅವರು ಇತಿಹಾಸ ತಿರುಚುತ್ತಾರೆ. ಪಠ್ಯಪುಸ್ತಕ ಸಮಿತಿಗೆ ಚಕ್ರತೀರ್ಥನಂಥವರನ್ನು ಹಾಕುವುದೇ ಈ ಉದ್ದೇಶಕ್ಕೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ರೋಹಿತ್‌ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡ್ಗೆವಾರ್ ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್‌ ಪಠ್ಯವನ್ನು ತೆಗೆದು ಹೆಡೆYàವಾರ್‌ ಭಾಷಣ ಹಾಕಿದ್ದಾನೆ. ಭಗತ್‌ ಸಿಂಗ್‌ಗಿಂತ ದೇಶಭಕ್ತ ಬೇಕಾ? ಇದನ್ನು ಯಾರಾದರೂ ಪ್ರಶ್ನಿಸಿದರೆ ದೇಶ ಬಿಟ್ಟು ಹೋಗಿ ಎನ್ನುತ್ತಾರೆ. ಯಾರು ದೇಶ ಬಿಟ್ಟು ಹೋಗಬೇಕಾದವರು?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಬಿಜೆಪಿ ಮುಖಂಡರ ಆಕ್ರೋಶ
ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದಿದ್ದಾರೆ. ಅವರು ಮುಸ್ಲಿಮರು ಮತ್ತು ರಾಹುಲ್‌ ಗಾಂಧಿ ಅವರನ್ನು ಸಂತೋಷಗೊಳಿಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಗುರವಾದ ಹೇಳಿಕೆಗಳು ಅವರ ಗೌರವಕ್ಕೆ ತಕ್ಕುದಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವೈಚಾರಿಕತೆ ಹೊಂದಿರುವ ನಾಯಕರು. ರಾಹುಲ್‌ ಗಾಂಧಿಯನ್ನು ಮೆಚ್ಚಿ ಸಲು ತೋಚಿದಂತೆ ಮಾತನಾ ಡು ತ್ತಿದ್ದಾರೆ. ಹೆಡ್ಗೆವಾರ್ ಕಾಂಗ್ರೆಸ್‌ ನಲ್ಲಿದ್ದರು ಹಾಗೂ ಸೇವಾದಳದ ಮುಖ್ಯಸ್ಥರಾಗಿದ್ದರು. ಕಾಂಗ್ರೆಸ್‌ ನಾಯಕರು ಬರೆದ ಪುಸ್ತಕದಲ್ಲಿ ಅವರ ಹೆಸರು, ಕ್ರಾಂತಿಕಾರರಿಗೆ ಮಾಡಿದ ಸಹಾಯವನ್ನು ದಾಖಲು ಮಾಡಿದ್ದಾರೆ. ಸೈದ್ಧಾಂತಿಕ ಭಿನ್ನತೆಯಿದ್ದರೂ ಅವರೊಬ್ಬ ಅಪ್ಪಟ ದೇಶಭಕ್ತರಾಗಿದ್ದರು. ಇಂಥವರ ಬಗ್ಗೆ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯ ಬಗ್ಗೆ ಅನುಕಂಪವಿದೆ ಎಂದು ಜೋಷಿ ಹೇಳಿದ್ದಾರೆ.

ಸಿದ್ದು ಅಲೆಮಾರಿ
ಸಿದ್ದರಾಮಯ್ಯ ಅಲೆಮಾರಿ. ಇಂಥವರು ಪ್ರಧಾನಿ, ಆರೆಸ್ಸೆಸ್‌ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ನೆಹರೂ ಮತ್ತು ಮೋದಿಯನ್ನು ಹೋಲಿಸಿ ನೀಡಿದ ಹೇಳಿಕೆ ಮತ್ತು ಆರೆಸ್ಸೆಸ್‌ ವಿದೇಶಿ ಸಂಘಟನೆ ಎಂಬ ಅವರ ಹೇಳಿಕೆ ಖಂಡನೀಯ. ಸಿದ್ದು ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಆರೆಸ್ಸೆಸ್‌ ಸ್ವಾತಂತ್ರ್ಯ ಪೂರ್ವ ದಿಂದಲೂ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಲು ಮತ್ತು ಹಿಂದುತ್ವ ಉಳಿಸಲು ಶ್ರಮಿಸುತ್ತಿದೆ. ನೆಹರೂ ಮತ್ತು ಅವರ ಸ್ನೇಹಿತರು ತಮ್ಮ ಅಧಿ ಕಾರದ ಆಸೆಗೆ ದೇಶವನ್ನು ಇಬ್ಭಾಗ ಮಾಡಿ ಹಿಂದೂಸ್ಥಾನ ಮತ್ತು ಪಾಕಿಸ್ಥಾನ ಎಂದು ಒಡೆದು ಹಾಕಿದ್ದರು. ಆದರೆ ಪ್ರಧಾನಿ ಮೋದಿ ಕಾಶ್ಮೀರದಲ್ಲಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ತೆಗೆದುಹಾಕಿ ಈ ದೇಶಕ್ಕೆ ಒಂದೇ ಸಂವಿಧಾನ ಮತ್ತು ಧ್ವಜ ನಿಯಮ ಜಾರಿಗೆ ತಂದಿದ್ದಾರೆ. ವಿಶ್ವವೇ ಮೆಚ್ಚಿಕೊಂಡಿರುವ ನಾಯಕ ರಾಗಿದ್ದಾರೆ ಎಂದರು.

ಸಿದ್ದು ಮೈಯಲ್ಲಿ ಮೆಕಾಲೆ ಭೂತ
ಸಿದ್ದರಾಮಯ್ಯನವರಿಗೆ ಆಗಾಗ ಮೆಕಾಲೆ ಭೂತ ಮೈಮೇಲೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಇಂತಹ ಮಾತುಗಳನ್ನು ಆಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರ ಲೆಕ್ಕಾಚಾರದಲ್ಲಿ ಗಾಂಧಿ, ಸರ್ದಾರ್‌ ಪಟೇಲ್‌, ಭಗತ್‌ ಸಿಂಗ್‌, ರಾಜಗುರು ಯಾರೂ ಭಾರತೀಯರೇ ಅಲ್ಲ ಎಂದರು.

ಸಿದ್ದರಾಮಯ್ಯ ಮುಸ್ಲಿಂ ಸಮುದಾಯ ಮತ್ತು ರಾಹುಲ್‌ ಗಾಂಧಿಯವರನ್ನು ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
-ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಪ್ರಸ್ತುತ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಎಲ್ಲರೂ ಆರೆಸ್ಸೆಸ್‌ ಹಿನ್ನೆಲೆಯಿಂದ ಬಂದವರು. ವಿದೇಶಿ ವ್ಯಕ್ತಿ ಸೋನಿಯಾ ಸೆರಗು ಹಿಡಿದು ಓಡಾಡುವ ಸಿದ್ದರಾಮಯ್ಯಪಾಠ ಹೇಳುವ ಅಗತ್ಯವಿಲ್ಲ.
-ಕೆ.ಎಸ್‌. ಈಶ್ವರಪ್ಪ, ಮಾಜಿ ಸಚಿವ

ಸಿದ್ದರಾಮಯ್ಯನವರ ಲೆಕ್ಕಾಚಾರದಲ್ಲಿ ಗಾಂಧಿ, ಸರ್ದಾರ್‌ ಪಟೇಲ್‌, ಭಗತ್‌ ಸಿಂಗ್‌ , ರಾಜಗುರು ಯಾರೂ ಭಾರತೀಯರೇ ಅಲ್ಲ.
-ಸಿ.ಟಿ. ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಆರೆಸ್ಸೆಸ್‌ನವರು ಇಟಲಿಯವರಂತೂ ಅಲ್ಲ. ಸಿದ್ದರಾಮಯ್ಯನವರು ಹಿರಿಯರು. ಎಲ್ಲವೂ ಗೊತ್ತಿದ್ದು, ಪ್ರಶ್ನಿಸುತ್ತಾರೆ; 70 ವರ್ಷವಾದ ಬಳಿಕ ಒಮ್ಮೊಮ್ಮೆ ಹೀಗೆ ಆಗಬಹುದು.
-ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next