ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ದಾವಣಗೆರೆಯ ಹೊರ ವಲಯದ ಎಸ್.ಎಸ್. ಪ್ಯಾಲೇಸ್ ಮೈದಾನದಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಾರಂಭಕ್ಕೂ ಹಲವಾರು ಗಂಟೆಯ ಮುನ್ನವೇ ಮೂರು ಲಕ್ಷಕ್ಕೂ ಹೆಚ್ಚು ಜನರು ನೆರೆದಿದ್ದಾರೆ.
ಮಳೆ, ಮೋಡ ಮುಸುಕಿದ ವಾತಾವರಣ ದ ನಡುವೆಯೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ದಾವಣಗೆರೆಗೆ ಆಗಮಿಸುತ್ತಿದ್ದಾರೆ. ಇಡೀ ದಾವಣಗೆರೆಯಲ್ಲಿ ವಾಹನಗಳ ಸಂಚಾರದ ಭರಾಟೆ ಕಂಡುಬರುತ್ತಿದೆ. ಕಾರ್ಯಕ್ರಮದ ಸಮಯ ಸಮೀಪಿಸುತ್ತಿರುವಂತೆ ಎಸ್. ಎಸ್. ಪ್ಯಾಲೇಸ್ ನತ್ತ ಹೋಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಸಹಸ್ರಾರು ಜನರು ರಾತ್ರಿಯೇ ಕಾರ್ಯಕ್ರಮದ ಸ್ಥಳದಲ್ಲೇ ತಂಗಿದ್ದರು. ಬೆಳಗ್ಗೆ 6 ಗಂಟೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದ ಜಾಗದಲ್ಲಿ ಸೇರಿದ್ದು, ರಾಷ್ಟ್ರೀಯ ಹೆದ್ದಾರಿ 4 ಸಂಪೂರ್ಣ ಜಾಮ್ ಆಗಿತ್ತು. 7ಗಂಟೆ ವೇಳೆಗೆ ಹೆಚ್ಚಿನ ಟ್ರಾಫಿಕ್ ಜಾಮ್ ಆಗಿ, ಸುಮಾರು 4 ಕಿ.ಮೀ. ದೂರ ವಾಹನ ಜಮಾವಣೆ ಆಗಿತ್ತು. 9 ಗಂಟೆ ವೇಳೆಗೆ ಸುಮಾರು 15 ಕಿಲೋಮೀಟರ್ ವರೆಗೂ ವಾಹನ ಸಂದಣಿ ಇದ್ದ ಕಾರಣ ವೇದಿಕೆಯಿಂದ 4-5 ಕಿಲೋ ಮೀಟರ್ ಇರುವಂತೆಯೇ ವಾಹನ ಇಳಿದು, ಜನರು ಪಡೆದುಕೊಂಡೇ ಹೋಗುತ್ತಿರುವುದು ಸಾಮಾನ್ಯವಾಗಿತ್ತು.
ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರದಿಂದಲೂ ಜನರು ಆಗಮಿಸುತ್ತಿದ್ದು, ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಕ್ರೂಸರ್, ಕಾರುಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ವಾಹನಗಳು ವಿವಿಧೆಡೆಯಿಂದ ಆಗಮಿಸಿವೆ. ಇನ್ನೂ ಹೆಚ್ಚು ವಾಹನಗಳಲ್ಲಿ ಜನರು ಆಗಮಿಸುತ್ತಿದ್ದಾರೆ.
ವಾಹನ ನಿಲ್ದಾಣಕ್ಕೆಂದೆ ಮೀಸಲಿರಿಸಲಾಗಿದ್ದ ಸ್ಥಳಕ್ಕೆ ವಾಹನಗಳು ತೆರಳಿದೆ, ಹೆದ್ದಾರಿ ಅಕ್ಕ ಪಕ್ಕದಲ್ಲಿಯೇ ಪಾರ್ಕ್ ಮಾಡಲು ಅವಕಾಶ ನೀಡಿದ್ದು, ಸಂಚಾರ ದಟ್ಟಣೆಗೆ ಕಾರಣವಾದರೆ, ನಿರೀಕ್ಷೆಗೂ ಮೀರಿ ಜನರು, ಸೇರಿರುವುದರಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿದೆ.
ಸಿದ್ದು ಅಭಿಮಾನಿಗಳು ವೇದಿಕೆ ಬಳಿಗೆ ಹೋಗಲು ಶತಾಯಗತಾಯ ಪ್ರಯತ್ನಿಸಿದ ಕಾರಣ 4-5 ಕಿಲೋಮೀಟರ್ ದೂರದಿಂದಲೇ ನಡೆದು ಹೋಗುತ್ತಿದ್ದಾರೆ.