Advertisement

ನಾನು ಜೆಡಿಎಸ್‌ ಬಿಡ್ಲಿಲ್ಲ

02:29 AM May 12, 2019 | Sriram |

ಬೆಂಗಳೂರು/ ಕಲಬುರಗಿ: ‘ನಾನು ಜೆಡಿಎಸ್‌ ಬಿಡಲಿಲ್ಲ, ಅಹಿಂದ ಸಮಾವೇಶ ಮಾಡಿದ್ದಕ್ಕೆ ಎಚ್.ಡಿ.ದೇವೇಗೌಡರೇ ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಹೀಗಾಗಿ, ನಾನು ಕಾಂಗ್ರೆಸ್‌ ಸೇರಬೇಕಾಯಿತು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಶನಿವಾರ ಇಡೀ ದಿನ ನಾನಾ ರೀತಿಯ ವಿಶ್ಲೇಷಣೆಗಳಿಗೂ ಕಾರಣವಾಗಿದೆ. ಮೈತ್ರಿ ಸರ್ಕಾರದ ಗೊಂದಲ ಮತ್ತು ಲೋಕಸಭೆ ಚುನಾವಣೆ ಫ‌ಲಿತಾಂಶ ಬಳಿಕದ ರಾಜಕೀಯ ಚಟುವಟಿಕೆಗಳಿಗೆ ಈ ಹೇಳಿಕೆ ವೇದಿಕೆ ಕಲ್ಪಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

Advertisement

ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಅವರಿಗೆ ತಿರುಗೇಟು ನೀಡುವ ಭರದಲ್ಲಿ ದೇವೇಗೌಡರು ತಮ್ಮನ್ನು ಪಕ್ಷದಿಂದ ಹೊರಹಾಕಿದರು ಎಂದು ಸಿದ್ದರಾಮಯ್ಯ ಹೇಳಿರುವುದು ಉಪ ಚುನಾವಣೆ ಕದನದಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸುವುದು ಮತ್ತು ಜೆಡಿಎಸ್‌ ನಾಯಕರಿಗೆ ಪರೋಕ್ಷ ಸಂದೇಶ ನೀಡುವುದು ಈ ಹಂತದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಯ ಹಿಂದೆ ಅಡಗಿದೆ.

ಜೆಡಿಎಸ್‌ನಿಂದ ನನಗೆ ಅನ್ಯಾಯವಾಯಿತು ಎಂದು ಮತ್ತೂಮ್ಮೆ ಹಳೇ ಕಥೆ ಕೆಣಕಿ ನೆನಪಿಸುವುದು. ಜತೆಗೆ ಅಹಿಂದ ನನ್ನ ಜತೆ ಇದೆ. ಅಹಿಂದ ಹೋರಾಟಕ್ಕಾಗಿಯೇ ನಾನು ಜೆಡಿಎಸ್‌ನಿಂದ ಹೊರದಬ್ಬಿಸಿಕೊಳ್ಳಬೇಕಾಯಿತು ಎಂದು ಹೇಳುವ ಮೂಲಕ ಅಹಿಂದ ವರ್ಗವೇ ನನ್ನ ಬಲ ಎಂಬುದನ್ನು ಪರೋಕ್ಷವಾಗಿ ಹೇಳುವ ಉದ್ದೇಶ ಇದರ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಬಿಜೆಪಿಯ ಅಶೋಕ್‌ಗೆ ತಿರುಗೇಟು ನೀಡಲು ಹಳೇ ಕಥೆ ನೆನಪಿಸಿದ್ದಾರೆ. ಸಿದ್ದರಾಮಯ್ಯ ಅವರ ಮಾತಿನ ಮರ್ಮ ಏನಿರಬಹುದು? ಎಂಬುದು ಸಹಜವಾಗಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಹೇಳಿದ್ದೇನು?: ಚಿಂಚೋಳಿ ವಿಧಾನಸಭೆ ಕ್ಷೇತ್ರದ ಅರಣಕಲ್ದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರಸಭೆ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್‌ನಿಂದ ಹೊರ ಹಾಕಿದ ಮೇಲೆ ನಾನು ಕಾಂಗ್ರೆಸ್‌ ಸೇರಿದ ವಿಚಾರಕ್ಕೂ ಡಾ| ಉಮೇಶ ಜಾಧವ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಆಗಿರುವುದಕ್ಕೂ ತಾಳೆ ಹಾಕುವುದು ಮೂರ್ಖತನ ಎಂದು ತಿಳಿಸಿದರು.

Advertisement

ಕಾಂಗ್ರೆಸ್‌ ಪಕ್ಷದವರು ಕೋಮುವಾದಿ ಬಿಜೆಪಿ ವಿರುದ್ಧ ಹೋರಾಡುವಂತೆ ಆಹ್ವಾನ ನೀಡಿದ್ದರಿಂದ ಕಾಂಗ್ರೆಸ್‌ಗೆ ಸೇರ್ಪಡೆ ಆಗಬೇಕಾಯಿತು. ಈ ವಿಷಯ ಬಿಜೆಪಿ ಮುಖಂಡ ಆರ್‌. ಅಶೋಕ್‌ಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ಡಾ| ಉಮೇಶ ಜಾಧವಗೆ ಕಾಂಗ್ರೆಸ್‌ ಪಕ್ಷ ಎಲ್ಲವನ್ನು ಕೊಟ್ಟಿತು. ಆದರೆ ಅಧಿಕಾರ ಹಾಗೂ ಅವಕಾಶವಾದಿ ಸಲುವಾಗಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ತನ್ನ ಲಾಭಕ್ಕಾಗಿ ಪಕ್ಷದ್ರೋಹ ಎಸಗಿದ್ದಾರೆ. ಇತಿಹಾಸ ಅರಿತು ಅಶೋಕ್‌ ಮಾತನಾಡಬೇಕು. ಹೀಗೆ ಮಾತನಾಡುವವರ ಮಾತಿಗೆ ಬೆಲೆ ಕೊಡುವ ಅಗತ್ಯವೂ ಇಲ್ಲ ಎಂದರು.

ಕಾಂಗ್ರೆಸ್‌ನ 20 ಶಾಸಕರು ಅತೃಪ್ತಿ ಹೊಂದಿದ್ದು, ಯಾವಾಗ ಏನು ಬೇಕಾದರೂ ಆಗಬಹುದು ಎಂದು ಯಡಿಯೂರಪ್ಪ ಒಂದು ವರ್ಷದಿಂದ ಹೇಳುತ್ತಲೇ ಇದ್ದಾನೆ. ಶಾಸಕರನ್ನು ಖರೀದಿಸಲು ಇವರ ಬಳಿ ದುಡ್ಡು ಎಲ್ಲಿಂದ ಬರುತ್ತದೆ. ನರೇಂದ್ರ ಮೋದಿ ಕೊಡ್ತಾನಾ? ಅಮಿತ್‌ ಶಾ ಕೊಡ್ತಾನಾ? ಅಥವಾ ಯಡಿಯೂರಪ್ಪ ಕೊಡ್ತಾನಾ? ಎಂದು ಏಕ ವಚನದಲ್ಲೇ ಪ್ರಶ್ನಿಸಿದ ಅವರು, ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ, ಸರ್ಕಾರ ಬೀಳಿಸೋದು ವಿರೋಧ ಪಕ್ಷದ ಕೆಲಸವಾ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪಗೆ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಸಂಖ್ಯಾಬಲ ತೋರಿಸಲು ಯಡಿಯೂರಪ್ಪಗೆ ಆಗಲಿಲ್ಲ ಎಂದು ಲೇವಡಿ ಮಾಡಿದರು. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಪ್ರಧಾನಿ ಆಗುವುದಿಲ್ಲ. ಮೇ 23ರ ನಂತರ ಮೋದಿ ಕೆಳಗಿಳಿಯುತ್ತಾರೆ. ರಾಹುಲ್ ಗಾಂಧಿಯೇ ಪ್ರಧಾನಿ ಆಗುತ್ತಾರೆ ಎಂದು ಹೇಳಿದರು.

ನಾರಾಯಣಗೌಡನ ಕೇಳಿ ಮೈತ್ರಿಯಾಗಲಿಲ್ಲ
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂಬ ಜೆಡಿಎಸ್‌ ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ನಾರಾಯಣಗೌಡನ ಜತೆ ಮಾತನಾಡಿಕೊಂಡು ಮೈತ್ರಿ ಮಾಡಿಲ್ಲ. ದೇವೇಗೌಡರ ಜತೆ ಮಾತನಾಡಿ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ನಾರಾಯಣಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

ಮೇ 21 ಕ್ಕೆ ಸಮಾನ ಮನಸ್ಕರ ಸಭೆ
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೆ ಸರಿಯಾದ ಆದ್ಯತೆ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಸಮಾನ ಮನಸ್ಕರ ಸಭೆ ಕರೆದು ಮುಂದೂಡಿದ್ದ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಮೇ 21 ರಂದು ಸಮಾನ ಮನಸ್ಕರ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಮತದಾನ ಮುಗಿದ ತಕ್ಷಣ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಕೆಲಸಗಳು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲು ಸಮಾನ ಮನಸ್ಕ ಶಾಸಕರ ಸಭೆ ನಡೆಸಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದರಿಂದ ಪಕ್ಷದ ನಾಯಕರು ಯಾವುದೇ ರೀತಿಯ ಸಭೆ ನಡೆಸದಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಸಭೆ ಮುಂದೂಡಲಾಗಿತ್ತು. ಈಗ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಮೇ 19 ರಂದು ಮತದಾನ ನಡೆಯುವುದರಿಂದ ಮತದಾನ ಮುಗಿದ ಮೇಲೆ ಮೇ 21 ರಂದು ಸಭೆ ಸೇರಿ ತಮ್ಮ ಬೇಡಿಕೆಗಳ ಕುರಿತು ಚರ್ಚಿಸಿ, ಕಾಂಗ್ರೆಸ್‌ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ.

ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮೇ 23 ರ ನಂತರ ಪ್ರತಿಯೊಬ್ಬರ ಸಮಸ್ಯೆಗಳನ್ನು ಒನ್‌ ಟು ಒನ್‌ ಆಲಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಕೆಲವು ಶಾಸಕರು ಮೇ 21 ರಂದು ನಡೆಸಲು ಉದ್ದೇಶಿಸಿರುವ ಸಮಾನ ಮನಸ್ಕ ಶಾಸಕರ ಸಭೆಯಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next