ಬೀದರ್: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾಕರ ಕಲ್ಯಾಣಕ್ಕೆ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಪ್ರಜಾಧ್ವನಿ ಯಾತ್ರೆ ನಿಮಿತ್ತ ನಡೆದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್, ಹಲಾಲ್ ಹೆಸರಿನಲ್ಲಿ ಬಿಜೆಪಿ ಸರಕಾರ ಅಲ್ಪಸಂಖ್ಯಾಕರ ವಿರುದ್ಧ ದ್ವೇಷ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಅವರು ಈ ದೇಶದ ಪ್ರಜೆಗಳಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾಕರು ಆತಂಕದಲ್ಲಿ ಬದುಕುವ ಸ್ಥಿತಿ ಇದೆ. ಸರಕಾರದ ದ್ವೇಷ, ಹಿಂದುತ್ವ ಮತ್ತು ಕೋಮುವಾದದ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ. ಬಿಜೆಪಿಯವರಿಗೆ ನಾಡಿನ ಅಭಿವೃದ್ಧಿಗಿಂತ ಭಾವನಾತ್ಮಕ ವಿಷಯ ಪ್ರಸ್ತಾಪಿಸುತ್ತ ಜನರನ್ನು ಎತ್ತಿ ಕಟ್ಟುವುದೇ ಕೆಲಸ. ಇದಕ್ಕೆ ನಳಿನ್‌ಕುಮಾರ್ ಕಟೀಲು ಅವರ ಅಭಿವೃದ್ಧಿಗಿಂತ ಲವ್ ಜಿಹಾದ್ ಮುಖ್ಯ ಎಂಬ ಹೇಳಿಕೆಯೇ ಸಾಕ್ಷಿ ಎಂದರು.
ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್, ಬಸವರಾಜ ರಾಯರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಹೀಂ ಖಾನ್, ಮಾಜಿ ಶಾಸಕ ಅಶೋಕ ಖೇಣಿ ಮುಂತಾದವರಿದ್ದರು.