Advertisement
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಚುನಾವಣ ಅಖಾಡದಲ್ಲಿ ಮುಂಚೂಣಿಗೆ ಬಂದು ನಿಂತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಅವರು ಇತ್ತೀಚಿನ ದಿನಗಳಲ್ಲಿ ಸೂಕ್ಷ್ಮವಾಗಿ ಮತ್ತು ಲೆಕ್ಕಾಚಾರದ ಹೆಜ್ಜೆಗಳನ್ನಿಡುತ್ತಿದ್ದಾರೆ. ಪ್ರತೀ ಮಾತಿನಲ್ಲೂ ಪಕ್ಷದೊಳಗಿನ ವಿರೋಧಿಗಳನ್ನು ಮಣಿಸಲು ಅಗತ್ಯವಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ “ಭ್ರಷ್ಟಾಚಾರ ಮಾಡಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ’ ಹೇಳಿಕೆ. ಆದರೆ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದುಂಟು. ಅವರು ಈಗ ಭ್ರಷ್ಟಾಚಾರದ ಕುರಿತು ಪ್ರಸ್ತಾವಿಸಿರುವುದರ ಹಿಂದೆ “ಹಿರಿಯ ನಾಯಕ’ನಿಗೆ ಸಡ್ಡು ಹೊಡೆದು ಮೌನವಾಗಿಸುವ ತಂತ್ರವಿದೆ ಎಂದು ಪಕ್ಷದೊಳಗೆ ವ್ಯಾಖ್ಯಾನಿಸಲಾಗುತ್ತಿದೆ.
Related Articles
Advertisement
ಆರೆಸ್ಸೆಸ್ ಜತೆ ಹೋಲಿಸುವ ಮೂಲಕ ಮತ್ತು ಅಲ್ಪಸಂಖ್ಯಾಕ ಸಮುದಾಯದ ಏಳ್ಗೆಗೆ ಯೋಜನೆಗಳನ್ನು ಪ್ರಸ್ತಾವಿಸುತ್ತಾ ಅಲ್ಪಸಂಖ್ಯಾಕರ ಪರವಾಗಿರುವ ಏಕೈಕ ನಾಯಕ ಎಂಬುದನ್ನು ಮತ್ತೆ ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ಬಿಂಬಿಸುತ್ತಲೇ ಇದ್ದಾರೆ. ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವವರನ್ನು ಮೌನವಾಗಿದ್ದು ಬೆಂಬಲಿಸುತ್ತಿದ್ದಾರೆ. ಸ್ಥಳೀಯ ಬೆಂಬಲಿಗರ
ಮೂಲಕ ಜೈಕಾರ ಹಾಕಿಸುತ್ತಿದ್ದಾರೆ. ಕೋಲಾರದಲ್ಲೂ ಬಲಪ್ರದರ್ಶನ/ಸಭೆ ನಡೆಸಿ ತಾನೇ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಪಕ್ಷದ ನಾಯಕರಿಗೇ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಹೊರಬಿದ್ದು ಕಾಂಗ್ರೆಸ್ ಸೇರಿದ ಅನಂತರ ನಿಧಾನವಾಗಿ ಆ ಪಕ್ಷವನ್ನು ಆಕ್ರಮಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಮೂಲ ನಿವಾಸಿಗಳು, ವಲಸಿಗರು ಎಂಬ ಅಪಸ್ವರ ಕೇಳಿಬಂದರೂ ಈಗ ಆ ಪ್ರಶ್ನೆ ಹೆಚ್ಚು ಕೇಳಿಬರುತ್ತಿಲ್ಲ. ಕಾಂಗ್ರೆಸ್‌ನಲ್ಲಿ ತಮ್ಮದೇ ಬೆಂಬಲಿಗರ ಪಡೆಯನ್ನು ಕಟ್ಟಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಮೂಲ ಜನತಾಪರಿವಾರದವರಿಗೆ ಅವರೇ ಪ್ರಶ್ನಾತೀತ ನಾಯಕ.
ಈ ನಡುವೆ ರಾಜ್ಯಮಟ್ಟದ ಕೆಲವು ನಾಯಕರು ಏಕಾಏಕಿ ಸಕ್ರಿಯ ರಾಜಕೀಯದಲ್ಲಿ ಸಿದ್ಧರಾಮಯ್ಯ ಪರವಾಗಿ ಅಖಾಡಕ್ಕಿಳಿದಿರುವುದು ಕಾಂಗ್ರೆಸ್‌ನ ಇನ್ನುಳಿದ ನಾಯಕರಿಗೆ ನುಂಗಲಾರದ ತುತ್ತಾಗಿದೆ. ನಿರಾಶೆಯೂ ಆಗಿದೆ. ಈ ವಾದಕ್ಕೆ ಪೂರಕವೆಂಬಂತೆ “ಪ್ರಜಾಧ್ವನಿ’ ರ್ಯಾಲಿ ವೇಳೆ ಏಕಾಏಕಿಯಾಗಿ ಬಡವರಿಗೆ ಹತ್ತು ಕಿಲೋ ಉಚಿತ ಅಕ್ಕಿ ಹಾಗೂ ಅಲ್ಪಸಂಖ್ಯಾಕ ಸಮುದಾಯಕ್ಕೆ ಹೆಚ್ಚಿನ ಅನುದಾನ ಘೋಷಣೆ ಹಿರಿಯ ನಾಯಕರಲ್ಲಿ ಗೊಂದಲ ಉಂಟುಮಾಡಿದೆ. ಮತದಾರರು ತಮ್ಮ ಪರವಾಗಿ ನಿಲ್ಲುವಂತೆ ಮಾಡುವ ತಂತ್ರ ಸಿದ್ದರಾಮಯ್ಯ ಅವರಿಗೇನೂ ಹೊಸದಲ್ಲ. ಅಹಿಂದ ಮತಗಳನ್ನೇ ಬಲವಾಗಿ ನೆಚ್ಚಿಕೊಂಡಿರುವ ಸಿದ್ದರಾಮಯ್ಯ ಹಿಂದುಳಿದ ಸಮುದಾಯ ಹಾಗೂ ಕುರುಬ ನಾಯಕರನ್ನು ಸೆಳೆದು ಆಪ್ತವರ್ಗಕ್ಕೆ ಸೇರಿಸಿಕೊಳ್ಳುತ್ತಾ ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸುತ್ತಿದ್ದಾರೆ. ಒಂದೊಮ್ಮೆ ಪಕ್ಷದ ಸರಕಾರ ಬಂದರೆ ಸಿಎಂ ಗಾದಿಗೇರುವ ಹಾದಿ ಸುಲಭವಾಗಿಸಿಕೊಳ್ಳಲು ಹೊರಟಿದ್ದಾರೆ.
ಇನ್ನು ಸಿದ್ದರಾಮಯ್ಯ ಕಳೆದ ಎರಡೂ¾ರು ಚುನಾವಣೆಗಳಿಂದ ಇದೇ ತಮ್ಮ ಕೊನೆಯ ಚುನಾವಣೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದರೂ ಸ್ಪರ್ಧಾ ಕಣದಿಂದ ದೂರ ಸರಿದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಅವರ ಬೆಂಬಲಿಗರಿಂದಲೂ ಇದೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರೂ ಕೈಹಿಡಿದ ದೂರದ ಬಾದಾಮಿ ಕ್ಷೇತ್ರವನ್ನು ಬಿಟ್ಟು ಈ ಬಾರಿ ರಾಜಧಾನಿಗೆ ಸನಿಹದ ಕೋಲಾರದತ್ತ ನಡೆದಿದ್ದಾರೆ. ಕಡೇ
ಕ್ಷಣ ಮೈಸೂರಿನತ್ತ ವಾಲಿದರೂ ಆಶ್ಚರ್ಯವಿಲ್ಲ ಎಂದೂ ಹೇಳಲಾಗುತ್ತಿದೆ. ಅತ್ತ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಕೆಲವು ಹಿರಿಯ ಕಾಂಗ್ರೆಸಿಗರೇ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ.
-ಎ.ವಿ.ಬಾಲಕೃಷ್ಣ ಹೊಳ್ಳ