Advertisement
ಹಲವು ವರ್ಷಗಳಿಂದಲೂ ಕೋಲಾರ ಜಿಲ್ಲಾ ಕಾಂಗ್ರೆಸ್ ಅನ್ನು ಕಾಡುತ್ತಿದ್ದ ಗುಂಪುಗಾರಿಕೆ ಕಳೆದ ಲೋಕಸಭಾ ಚುನಾವಣೆಯ ನಂತರ ಸ್ಪಷ್ಟ ರೂಪ ಪಡೆದುಕೊಂಡು ಇಬ್ಭಾಗವಾಗಿದೆ. ಈಗ ಒಂದು ಗುಂಪು ಸಿದ್ದರಾಮಯ್ಯರನ್ನು ಕರೆದುಕೊಂಡು ಬರಲು ಸಜ್ಜಾಗುತ್ತಿದೆ. ಮತ್ತೂಂದು ಗುಂಪು ಸಿದ್ದರಾಮಯ್ಯರ ಸ್ಪರ್ಧೆಗೆ ಪರೋಕ್ಷವಾಗಿ ಹಿಂದೇಟು ಹಾಕುತ್ತಿದೆ. ಮರು ಆಯ್ಕೆ ಲೆಕ್ಕಾಚಾರ ಸಿದ್ದರಾಮಯ್ಯರನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡುತ್ತಿರುವ ಗುಂಪು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರಯತ್ನಿಸುತ್ತಿದೆ ಎಂಬ ಆರೋಪವೂ ಇದೆ. ಮುಖಂಡರ ಕಿತ್ತಾಟದಿಂದ ಮುಸುಕಾಗಿರುವ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ವರ್ಚಸ್ಸನ್ನು ಸಿದ್ದರಾಮಯ್ಯರ ಸ್ಪರ್ಧೆ ಹೊಳಪುಗೊಳಿಸುತ್ತದೆ, ಹಾಗೆಯೇ ಹಾಲಿ ಶಾಸಕರ ಮರು ಆಯ್ಕೆಯ ಗೆಲುವಿಗೂ ಸಹಕಾರಿಯಾಗುತ್ತದೆ ಎನ್ನುವುದು ಒಳ ಲೆಕ್ಕಾಚಾರದ ಭಾಗವಾಗಿದೆ.
Related Articles
Advertisement
2ನೇ ಸಾಲಿನ ನಾಯಕರಿಲ್ಲದ, ಕಾಂಗ್ರೆಸ್ ಕಾರ್ಯಕರ್ತರನ್ನು ವರ್ತೂರು ಬಣಕ್ಕೆ ವಲಸೆ ಕಳುಹಿಸಿರುವ ಕೋಲಾರದಂತ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪ್ರಚಾರ ಕಾರ್ಯದಲ್ಲಿ ಮುಂದಿದೆ. ಆದರೆ, ಸಿದ್ದರಾಮಯ್ಯರ ಪರ ಹೀಗೆ ಮತದಾರರ ಮನೆ ಬಾಗಿಲಿಗೆ ತೆರಳುವ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತಿದೆ. ಏಕೆಂದರೆ ಸಿದ್ದರಾಮಯ್ಯರನ್ನು ಸ್ವಾಗತಿಸುತ್ತಿರುವ ಗುಂಪಿನ ಬಹುತೇಕ ಹಾಲಿ ಶಾಸಕರು ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪ್ರಭಾವಿಗಳೇ ಹೊರತು ಕೋಲಾರ ಕ್ಷೇತ್ರದಲ್ಲಲ್ಲ ಎನ್ನುವುದು ವಾಸ್ತವಾಂಶ. ಹಾಗೆಯೇ ತಟಸ್ಥವಾಗಿ ಉಳಿದುಕೊಂಡಿರುವ ಗುಂಪಿನ ಮುಖಂಡರಿಗೂ ಈ ರೀತಿಯ ಶಕ್ತಿ ಸಾಮರ್ಥ್ಯಗಳಿಲ್ಲ ಎನ್ನುವುದು ನಿರ್ವಿವಾದ.
ಜೆಡಿಎಸ್ ಬಿಜೆಪಿ ಕಾರ್ಯತಂತ್ರ : ಸಿದ್ದರಾಮಯ್ಯರನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಹೇಗೆಲ್ಲಾ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅವರ ಕಡು ವಿರೋಧಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಸಮಾವೇಶ, ಜಲಧಾರೆ, ಪಂಚರತ್ನ ಯಾತ್ರೆಗಳು, 3ವರ್ಷಗಳ ಸೇವಾ ಕಾರ್ಯಕ್ರಮಗಳ ಮೂಲಕ ಘೋಷಿತ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿ ವರ್ತೂರು ಪ್ರಕಾಶ್ ತಮಗೆ ಕ್ಷೇತ್ರದ ಮೇಲಿರುವ ಹಿಡಿತವನ್ನು ಸಮಯ ಸಿಕ್ಕಾಗಲೆಲ್ಲಾ ಸಾರಿ ಹೇಳುತ್ತಾ ತೊಡೆ ತಟ್ಟುತ್ತಿದ್ದಾರೆ. ಈ ಎರಡೂ ಪಕ್ಷಗಳ ಪ್ರಚಾರ ಪ್ರಯತ್ನಕ್ಕೆ ಹೋಲಿಸಿದರೆ ಇನ್ನೆಂದೂ ಒಂದಾಗುವುದಿಲ್ಲವೆಂಬ ಮುಖಂಡರ ಒಡಕಿನ ಕೋಲಾರ ಕಾಂಗ್ರೆಸ್ ಮನೆಗೆ ಸಿದ್ದರಾಮಯ್ಯರನ್ನು ಕರೆ ತರುವ ಪ್ರಯತ್ನ ಪೇಲವವಾಗಿ ಕಾಣಿಸುತ್ತಿದೆ.
ಸಿದ್ದರಾಮಯ್ಯನವರೇ ಉತ್ತರ ನೀಡಬೇಕು : 15-20 ವರ್ಷಗಳಿಂದಲೂ ಕಾಂಗ್ರೆಸ್ ಅನ್ನು ಇತರ ಪಕ್ಷಗಳ ಅಭ್ಯರ್ಥಿಗಳ ಗೆಲ್ಲಿಸಲು ಬಳಸಿ ಯಾವುದೇ ಮುಜುಗರವಿಲ್ಲದೆ ಬಹಿರಂಗವಾಗಿ ಶ್ರಮಿಸಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರು ಈಗ ಒಗ್ಗೂಡುವ ಪ್ರಯತ್ನವನ್ನು ಮಾಡದೆ ಸಿದ್ದರಾಮಯ್ಯರನ್ನು ಯಾವ ಧೈರ್ಯದ ಮೇಲೆ ಕೋಲಾರಕ್ಕೆ ಕರೆ ತರುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯರ ಅಭಿಮಾನಿಗಳು ಕೇಳುತ್ತಿದ್ದಾರೆ. ಇಂತಹ ಹಲವಾರು ಪ್ರಶ್ನೆಗಳಿಗೆ ಇನ್ನೂ 24 ಗಂಟೆಯಲ್ಲಿ ಕೋಲಾರಕ್ಕೆ ಆಗಮಿಸಲಿರುವ ಸಿದ್ದರಾಮಯ್ಯರೇ ಸೋಮವಾರದ ಸಭೆಯಲ್ಲಿ ಉತ್ತರ ನೀಡಿ ಕೋಲಾರ ಕ್ಷೇತ್ರದ ಮತದಾರರ ಮನ ಗೆಲ್ಲುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿರುವುದು ಸದ್ಯದ ಕೋಲಾರ ಕಾಂಗ್ರೆಸ್ ಪರಿಸ್ಥಿತಿ.
– ಕೆ.ಎಸ್.ಗಣೇಶ್