ಸಿದ್ದಾಪುರ: ಮುಂಗಾರು ಮಳೆ ಪ್ರಾರಂಭವಾಗಿ ಒಂದೂವರೆ ತಿಂಗಳಿದಾರೂ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ತುಂಗಭದ್ರಾ ನದಿ ಸಂಪೂರ್ಣ ಬತ್ತಿದ್ದು ಜನ ಜಾನುವಾರುಗಳಿಗೆ ಜಲ ಸಂಕಷ್ಟ ಎದುರಾಗಿದೆ.
ನದಿ ತೀರದ ರೈತರು ತುಂಗಭದ್ರಾ ಡ್ಯಾಂ ನೀರು ನಂಬಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುತ್ತಾರೆ. ಅದರಂತೆ ಈ ಬಾರಿಯು ಮುಂಗಾರು ಹಂಗಾಮಿಗೆ ಭತ್ತ ಬೆಳೆಯಲು ತುಂಗಭದ್ರಾ ನದಿ ನೀರು ಆಶ್ರಯಿಸಿ ಭತ್ತದ ಸಸಿಮಡಿ ಹಾಕಿದ್ದರು. ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ಮಳೆಯಾಗದ ಹಿನ್ನೆಲೆಯಲ್ಲಿ ಬಹುತೇಕ ತುಂಗಭದ್ರಾ ನದಿ ಬರಿದಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹಾಕಿದ್ದ ಸಸಿಮಡಿ ಉಳಿಸಿಕೊಳ್ಳಲು ರೈತರು ನದಿಯಲ್ಲಿ ಅಲ್ಲಲ್ಲಿ ಗುಂಡಿಗಳಲ್ಲಿ ನಿಂತಿರುವ ನೀರನ್ನು ಪೈಪ್ ಮೂಲಕ ತಂದ ಸಸಿಮಡಿಗೆ ಹಾಯಿಸಿಕೊಳ್ಳುತ್ತಿದ್ದಾರೆ.
ಕುಡಿಯುವ ನೀರಿಗೂ ತೊಂದರೆ: ತುಂಗಭದ್ರಾ ನದಿಯಿಂದ ನದಿ ಪಾತ್ರ ಸೇರಿದಂತೆ ಇತರ ನೂರಾರು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಕುಡಿಯುವ ನೀರನ್ನು ಒದಗಿಸಲಾಗಿತ್ತು. ಆದರೆ ನದಿ ಬತ್ತಿರುವ ಪರಿಣಾಮ ಬಹುಗ್ರಾಮ ಕುಡಿಯುವ ನೀರಿನ ಸಂಪಿನ ಹತ್ತಿರ ನೀರಿಲ್ಲದ ಕಾರಣ ಕುಡಿಯುವ ನೀರಿನ ಘಟಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕುಡಿಯುವ ನೀರಿನ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಾಗಲಿದೆ ಎನ್ನಲಾಗಿದೆ.
ರಸ್ತೆಯಂತಾದ ನದಿ: ನದಿಯಲ್ಲಿ ನೀರು ಇದ್ದಾಗ ಎರಡು ಜಿಲ್ಲೆಗಳ ಸಂಪರ್ಕಕ್ಕೆ ಜನ ತೆಪ್ಪ ಬಳಸುತ್ತಿದ್ದರು. ಆದರೆ ಈಗ ತುಂಗಭದ್ರಾ ನದಿ ಬತ್ತಿರುವ ಪರಿಣಾಮ ಬಳ್ಳಾರಿ, ಕೊಪ್ಪಳ, ರಾಯಚೂರಿನ ಬಹುತೇಕ ನದಿಪಾತ್ರದ ಗ್ರಾಮಗಳ ಜನರು ನದಿಯಲ್ಲಿ ಈ ಕಡೆಯಿಂದ ಆಕಡೆಗೆ ಯಾವ ಸಹಾಯವಿಲ್ಲದೆ ಬೈಕ್ ಮೂಲಕ ಓಡಾಡುತ್ತಿದ್ದಾರೆ.
ನದಿಗೆ ನೀರು ಬಿಡಿ: ಮಲೆನಾಡು ಭಾಗದಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಆದರೆ ಜಲಾಶಯದ ಕೆಳಗಡೆ ನದಿ ಸಂಪೂರ್ಣ ಬತ್ತಿರುವ ಪರಿಣಾಮ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದನ್ನು ಗಮನಿಸಿ ನದಿಗೆ ನೀರು ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.