Advertisement

ನಗರೋತ್ಥಾನ ಸಮರ್ಪಕ ಬಳಕೆ

04:13 PM Mar 11, 2020 | Naveen |

ಸಿದ್ದಾಪುರ: ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಈ ಮೊದಲಿನ ನಗರೋತ್ಥಾನ- ಹಂತ 3ರಲ್ಲಿ ಒಟ್ಟೂ 1.70 ಕೋಟಿ ರೂ.ಗಳ ಮಂಜೂರಾತಿ ದೊರಕಿದ್ದು 2 ಕುಡಿಯುವ ನೀರಿನ ಕಾಮಗಾರಿಗಳು, 4 ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳು ಅನುಷ್ಠಾನಗೊಂಡಿವೆ.

Advertisement

ಕೊಂಡ್ಲಿ ಭೂ ಮಟ್ಟದ ಜಲಗಾರದಿಂದ ಹಾಳತಕಟ್ಟಾ ವಾಜಪೇಯಿ ವಸತಿ ನಿವೇಶನಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಪೈಪ್‌ಲೈನ್‌ ಅಳವಡಿಕೆಗೆ 25 ಲಕ್ಷ ರೂ., ಅರೆಂದೂರು ಜಲಾಗಾರದ ಜಾಕ್‌ವೆಲ್‌ ಬಳಿ ನಿರ್ಮಿಸಿರುವ ಪಿಕ್‌ಅಪ್‌ ಡ್ಯಾಂ ಸುಧಾರಣೆಗೆ 25 ಲಕ್ಷ ರೂ., ಪರಿಶಿಷ್ಟರು ವಾಸಿಸುವ ಕಾಳಿದಾಸ ಗಲ್ಲಿ ರಸ್ತೆ ಕಾಂಕ್ರೀಟಕರಣಕ್ಕೆ 30 ಲಕ್ಷ ರೂ., ಹೊಸೂರು ಕಾನಕೇರಿ ರಸ್ತೆ ಡಾಂಬರೀಕರಣ, ಹೊಸೂರು ಎಲ್‌.ಬಿ. ನಗರದಲ್ಲಿ ರಸ್ತೆ ಡಾಂಬರೀಕರಣಗಳಿಗೆ ಒಟ್ಟೂ 30 ಲಕ್ಷ ರೂ., ರವೀಂದ್ರನಗರದ ಕೆಳಭಾಗದ ಹೊನ್ನೆಗುಂಡಿ ರಸ್ತೆ ಡಾಂಬರೀಕರಣ, ಹೊನ್ನೆಗುಂಡಿ ವಾಸ್ತವ್ಯದ ಮನೆಗಳ ಹಿಂಭಾಗದಲ್ಲಿ ಮಣ್ಣಿನ ಮುಖ್ಯ ಕಾಲುವೆಗೆ ಆರ್‌ ಸಿಸಿ ಗಟಾರ ನಿರ್ಮಾಣ ಕಾಮಗಾರಿಗೆ 30 ಲಕ್ಷ ರೂ., ಸೊರಬ ಮುಖ್ಯ ರಸ್ತೆಯ ಹಾಳತಕಟ್ಟಾ ನಾಕಾದಿಂದ ಬಿಡಿಓ ಕ್ವಾರ್ಟರ್ಸ್‌ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ 30 ಲಕ್ಷ ರೂ.ನಂತೆ ಕಾಮಗಾರಿಗಳನ್ನು ಎತ್ತಿಕೊಂಡಿದ್ದು ಅವೆಲ್ಲವೂ ಪೂರ್ಣಗೊಂಡಿವೆ.

ನಗರೋತ್ಥಾನ ಕಾಮಗಾರಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಅರೆಬರೆಯಾಗಿಲ್ಲ. ಈ ಪಪಂನಲ್ಲಿ ಈ ಯೋಜನೆ ಮಾತ್ರವಲ್ಲ, ಬಹುತೇಕ ಎಲ್ಲ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳುವುದು ಇಲ್ಲಿನ ವೈಶಿಷ್ಟ್ಯತೆ. ಈ ಸಣ್ಣ ಪಪಂ ಆಗಿರುವ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ದೊರೆಯುವುದು ಕಡಿಮೆಯಾಗಿರುವುದಕ್ಕೆ ದೊರೆತ ಅನುದಾನದ ಸದ್ಬಳಕೆ ಮಾಡಿಕೊಳ್ಳುವುದು ಒಂದು ಕಾರಣವಾದರೆ ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಅರಿತ ಸದಸ್ಯರು ಕಾಮಗಾರಿಗಳ ಕುರಿತು ನಿಗಾ ವಹಿಸುವುದು ದೊರೆತ ಅನುದಾನ ವಾಪಸ್‌ ಆಗದಿರುವುದಕ್ಕೆ ಇನ್ನೊಂದು ಕಾರಣ. ಈ ಕಾಮಗಾರಿಗಳು ಗುಣಮಟ್ಟದ ದೃಷ್ಟಿಯಿಂದ ಸಾಕಷ್ಟು ಉತ್ತಮವಾಗಿವೆ.

ನಗರೋತ್ಥಾನ ಕಾಮಗಾರಿಗಳ ಅನುದಾನ ದೊರೆತಿರುವುದು ಈ ಪಪಂಗೆ ಸಾಕಷ್ಟು ಅನುಕೂಲವಾಗಿದೆ. ಆಡಳಿತದ ದೃಷ್ಟಿಯಿಂದ ಹೇಳುವದಾದರೆ ಪಟ್ಟಣದ ಎಲ್ಲ ವಾರ್ಡ್‌ಗಳ ಮೂಲಸೌಕರ್ಯ ಒದಗಿಸುವಲ್ಲಿ ಎದುರಾಗಬಹುದಾದ ಅನುದಾನದ ಕೊರತೆಯನ್ನು ನಗರೋತ್ಥಾನ ಕಾಮಗಾರಿಯ ಅನುದಾನ ಸ್ವಲ್ಪಮಟ್ಟಿಗೆ ನಿವಾರಿಸಿದೆ. ಅಲ್ಲದೇ ಆಯಾ ಸ್ಥಳದಲ್ಲಿನ ಸ್ಥಿತಿ ಅರಿತ ಅಧಿಕಾರಿಗಳು, ಸದಸ್ಯರು ಅಲ್ಲಿಗೆ ಹೊಂದುವ ರೀತಿಯಲ್ಲಿ ಕಾಮಗಾರಿಗಳನ್ನು ಸಂಯೋಜಿಸುವದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಇದರಿಂದ ಮಾಡುವ ಕೆಲಸ ಸಾಕಷ್ಟು ಗುಣಮಟ್ಟದ್ದು ಆಗಿದೆ.

ನಗರೋತ್ಥಾನ-ಹಂತ 3ರ ಕಾಮಗಾರಿ ಅನುಷ್ಠಾನಗೊಂಡು ಸುಮಾರು 3-4 ವರ್ಷಗಳು ಕಳೆಯುತ್ತ ಬಂದಿವೆ. ಇನ್ನು ಹಂತ 4ನೇಯದು ಮಂಜೂರಾಗಬೇಕಿದೆ. ಕಾಲಕಾಲಕ್ಕೆ ವ್ಯವಸ್ಥಿತವಾದ ರೀತಿಯಲ್ಲಿ ಅನುದಾನ ದೊರೆತರೆ ಪಟ್ಟಣದ ಮೂಲ ಸೌಕರ್ಯವನ್ನು ಬಹುಮಟ್ಟಿಗೆ ಒದಗಿಸಲು ಸಾಧ್ಯ.

Advertisement

ನಗರೋತ್ಥಾನ-ಹಂತ 3 ಕಾರ್ಯಗತಗೊಳ್ಳುವಾಗ ಪಟ್ಟಣ ವ್ಯಾಪ್ತಿಯಲ್ಲಿ 12 ವಾರ್ಡ್‌ಗಳಿದ್ದವು. ಅವು ಈಗ 13ಕ್ಕೆ ಏರಿದೆ. ಇದರಿಂದ ಅನುದಾನದ ಮೊತ್ತವೂ ಹೆಚ್ಚಾಗಬೇಕಾಗುತ್ತದೆ ಎನ್ನುವುದು ಬಹುತೇಕ ನಗರವಾಸಿಗಳ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next