ಸಿದ್ದಾಪುರ: ಮಕರಸಂಕ್ರಮಣ ಸೂರ್ಯ ತನ್ನ ದಿಕ್ಕನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಾಯಿಸುವ ಮಹಾಸುದಿನ. ಮೃತ್ಯುವಿನ ಅಧೀದೇವತೆ ಯಮನಿಂದ ಸಂಪತ್ತಿನ ದೇವತೆ ಕುಬೇರನತ್ತ ದಿಕ್ಕು ಬದಲಾಗುತ್ತಿದ್ದು ನರಕದಿಂದ ಸ್ವರ್ಗದ ಕಡೆ ಸಾಗುತ್ತದೆ. ಮಕರ ಸಂಕ್ರಮಣದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಭಾನ್ಕುಳಿ ರಾಮದೇವಮಠದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಗೋದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸತ್ತಮೇಲೆ ಸಿಗುವ ಸ್ವರ್ಗವಾಗಿರದೇ ಬದುಕಿರುವಾಗಲೇ ದೊರೆತ ಗೋಸ್ವರ್ಗದಲ್ಲಿಂದು ಗೋಸಂತರ್ಪಣೆ, ಹಾಲು ಹಬ್ಬ, ಹುಗ್ಗಿಹಬ್ಬ ನಡೆದಿದೆ. ಸಂಗೀತ ಯಕ್ಷಗಾನಗಳನ್ನೊಳಗೊಂಡ ಗೋಕಲಾ ಕಾರ್ಯಕ್ರಮಗಳು ಸಂಪನ್ನಗೊಂಡವು.
ವಿಶೇಷ ಗೋಪೂಜೆ, ಗೋತುಲಾಭಾರ, ತೀರ್ಥರಾಜ ಸ್ನಾನ, ಉಯ್ನಾಲೆ ಸೇವೆಗಳು ನಡೆದಿವೆ. ಗೋಸ್ವರ್ಗದ ಹಸುಗಳು ಎಂದೂ ಆಕ್ರಂದನ ಮಾಡುವುದಿಲ್ಲ. ಹರ್ಷಾಭಿವ್ಯಕ್ತಿ ಮಾಡುತ್ತಿವೆ. ಗೋವಿನ ದರ್ಶನ ಮಾತ್ರದಿಂದ ಪಾಪನಾಶವಾಗುತ್ತದೆ ಎನ್ನುವ ಪ್ರತೀತಿಯಿದೆ. ಗೋ ಮೂತ್ರ, ಪಂಚಗವ್ಯ ಪ್ರಾಶನ ಮಾಡಿದರೆ ಅದರ ಸತ್ವ ನಮ್ಮ ದೇಹದ ಎಲುಬಿನಿಂದ ಚರ್ಮದವರೆಗೂ ವ್ಯಾಪಿಸುತ್ತದೆ. ಆದರೆ ನಾವು ಗೋವನ್ನು ಉಪೇಕ್ಷೆ ಮಾಡಿದ್ದೇವೆ.
ವಿಶ್ವದಲ್ಲಿ ವರ್ಷದ ಒಂದು ದಿನವಾದರೂ ಗೋದಿನ ಆಚರಣೆ ಘೋಷಣೆಯಾಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ರೈತರು ಮನೆಗಳಲ್ಲಿ ಗೋವನ್ನು ಕಟ್ಟಿ ಸಾಕುತ್ತಾರೆ. ಗೋವುಗಳು ಹಸಿದಾಗ ಆಹಾರ ಸಿಗುವುದಿಲ್ಲ. ಯಜಮಾನ ಹಾಕಿದಾಗಲಷ್ಟೇ ಗೋವುಗಳಿಗೆ ನೀರು ಆಹಾರ ದೊರೆಯುತ್ತದೆ. ಕರುವಿಗೆ ಸೇರುವ ಹಾಲನ್ನೂ ಹಿಂಡುತ್ತೇವೆ. ಆದರೆ ಗೋಸ್ವರ್ಗದ ಚಿತ್ರಣವೇ ಬೇರೆ. ಇಲ್ಲಿಯ ಗೋವುಗಳಿಗೆ ಬಂಧನವಿಲ್ಲ. ಬೇಕಾದಾಗ ಪೌಷ್ಠಿಕ ಆಹಾರ, ಬಾಯಾರಿಕೆಯಾದಾಗ ನೀರು, ಛಳಿಯಾದಾಗ ಬಿಸಿಲು, ಸೆಖೆಯಾದಾಗ ನೆರಳು ಎಲ್ಲವೂ ಸಿಗುತ್ತವೆ. ಕರುವಿನ ಪಾಲಿನ ಹಾಲನ್ನು ಕಸಿಯುವುದಿಲ್ಲ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ದೇಶೀಯ ತಳಿಗಳು ಇಲ್ಲಿ ಸ್ವತ್ಛಂದವಾಗಿ ವಿಹರಿಸುತ್ತಿವೆ. ಅಕ್ಷರಶಃ ಗೋಸ್ವರ್ಗ ಗೋವಿನ ಪಾಲಿನ ಸ್ವರ್ಗವಾಗಿದೆ ಎಂದರು.
ಗಣೇಶ ಭಟ್ಟ ಹೊಸೂರು, ಶ್ರೀಧರ ಹೆಗಡೆ ಮದ್ದಿನಕೇರಿ ಹುಟ್ಟುಹಾಕಿದ ಆದ್ಯೋತ ವೆಬ್ ಪತ್ರಿಕೆಗೆ ಚಾಲನೆ ನೀಡಿದ ಶ್ರೀಗಳು, ಈ ಮಾಧ್ಯಮವು ಜನರ ಜೀವನದ ಒಳಹೊರಗೆ ಬೆಳಕು ಚೆಲ್ಲುವಂತಾಗಲಿ. ರಾಜ್ಯ, ದೇಶ, ವಿಶ್ವದಾದ್ಯಂತ ಬೆಳಗಲಿ ಎಂದು ಹಾರೈಸಿದರು. ಮಂಗಳೂರು, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ 33 ಕೋಟಿ ದೇವತೆಗಳ ಆವಾಸ ಸ್ಥಾನವಾದ ಗೋವು ಭೂಮಂಡಲವನ್ನು ಹೊತ್ತ ಮಾತೆಯಾಗಿದೆ. ಇಂತಹ ಗೋವಿನ ಸಂರಕ್ಷಣೆ ಮಾಡುತ್ತಿರುವ ಗೋಸ್ವರ್ಗ ಅಭಿವೃದ್ಧಿ ಕಾರ್ಯಗಳಿಗೆ ಒಕ್ಕೂಟದ ವತಿಯಿಂದ ಸಹಕಾರ ನೀಡಲು ಮುಂದೆಯೂ ಬದ್ಧರಾಗಿದ್ದೇವೆ ಎಂದು ಹೇಳಿ 50 ಸಾವಿರ ರೂ.ಗಳನ್ನು ಸಮರ್ಪಿಸಿದರು.
ಹಾಲು ಒಕ್ಕೂಟದ ಮ್ಯಾನೇಜಿಂಗ್ ಡೈರಕ್ಟರ್ ಡಾ| ಜಿ.ವಿ. ಹೆಗಡೆ, ಜಿಪಂ ಸದಸ್ಯರಾದ ಎಂ.ಜಿ. ಹೆಗಡೆ ಗೆಜ್ಜೆ, ನಾಗರಾಜ ನಾಯ್ಕ ಬೇಡ್ಕಣಿ, ಸುಮಂಗಲಾ ನಾಯ್ಕ, ಸಮರ್ಥ ಭಾರತದ ಜಿಲ್ಲಾ ಪ್ರಮುಖ ಗುರುಪ್ರಸಾದ ಹೆಗಡೆ, ಶಿವಮೊಗ್ಗಾ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ ಇತರರು ಉಪಸ್ಥಿತರಿದ್ದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.