ಸಿದ್ದಾಪುರ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತೋಟಗಾರಿಕೆ ಇಲಾಖೆ ಸಿದ್ದಾಪುರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ವಿಸ್ತರಣಾ ಶಿಕ್ಷಣ ಘಟಕ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವಲಯ ಯೋಜನೆಯಡಿ ಜೇನು ಕೃಷಿ ಕೌಶಲ ತರಬೇತಿ ಕಾರ್ಯಕ್ರಮವನ್ನು ಬಿಳಗಿ ಮಧುವನ ಮತ್ತು ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಹವಾಮಾನ ವೈಪರಿತ್ಯ, ಮಳೆ ಕೊರತೆ, ಕೀಟ ರೋಗ ಬಾಧೆಗಳಿಂದ ಮಲೆನಾಡಿನ ರೈತರು ತೊಂದರೆ ಅನುಭವಿಸುತ್ತಿದ್ದು, ಜೇನು ಕೃಷಿಯಿಂದ ರೈತರ ಆದಾಯ ಹೆಚ್ಚುವುದಲ್ಲದೇ ಪ್ರತೀ ಮನೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಜೇನು ಕೃಷಿ ತರಬೇತಿ ಪಡೆಯುವಂತಾಗಬೇಕು. ಪ್ರತೀ ಗ್ರಾಪಂಗಳಲ್ಲಿಯೂ ಆಸಕ್ತರನ್ನು ಗುರುತಿಸಿ ಜೇನುಕೃಷಿ ಪ್ರೋತ್ಸಾಹಿಸಬೇಕು.
ತಾಲೂಕಿನಲ್ಲಿ ಜೇನುಕೃಷಿಯಲ್ಲಿ ಉತ್ತಮ ಹೆಸರುಗಳಿಸಿದ ಯುವಕರು ಜೇನಿನ ವಿವಿಧ ಉತ್ಪನ್ನಗಳನ್ನು ಮತ್ತಷ್ಟು ತಯಾರಿಸಿ ಆದಾಯ ಗಳಿಸಲು ತರಬೇತಿ ಅತೀ ಅಗತ್ಯವಾಗಿದೆ. ಸರ್ಕಾರದ ಭರವಸೆ ಯೋಜನೆಗಳು ಪ್ರತೀ ಮನೆಗಳನ್ನು ತಲುಪುವಂತೆ, ತೋಟಗಾರಿಕೆ ಇಲಾಖೆ ಜೇನು ಕೃಷಿ ಕಾರ್ಯಕ್ರಮಗಳನ್ನು ಭೂರಹಿತ ಕೂಲಿಕಾರ್ಮಿಕರೂ ಪಡೆಯಲು ಸಾಧ್ಯವಿದೆ. ಸರ್ಕಾರದ ಸಹಾಯಧನ ನಿರೀಕ್ಷೆ ಒಂದೇ ಉದ್ದೇಶವಾಗದೇ ಜೇನುಕೃಷಿಯಿಂದ ರೈತರು ತೋಟಗಳಲ್ಲಿ ಶೇ. 25-52 ಪ್ರತಿಶತ ಇಳುವರಿ ಹೆಚ್ಚಿಸಲು ಸಾಧ್ಯವಿದೆ ಎಂದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅರುಣ್ ಎಚ್.ಜಿ. ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ಡಾ| ಬಿ. ಪಿ. ಸತೀಶ, ಜೇನುಕೃಷಿ ಬೆಳವಣಿಗೆ, ಉದ್ದೇಶ, ಮಹತ್ವ ಮತ್ತು ನಿರ್ವಾಹಣೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಳಗಿ ಗ್ರಾಪಂ ಅಧ್ಯಕ್ಷ ಮಹೇಶ ನಾಯ್ಕ ಮಾತನಾಡಿದರು. ಉಪಾದ್ಯಕ್ಷೆ ಸುವರ್ಣ ಪ್ರಭಾಕರ ನಾಯ್ಕ, ಕ್ಯಾದಗಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ನಾಯ್ಕ, ರಾಜು ನಾಯ್ಕ, ವಸಂತ ನಾಯ್ಕ, ಮಾಲಿನಿ ದೇವರಾಜ ಮಡಿವಾಳ, ಶಾರದಾ ಪುಟ್ಟಪ್ಪ ವಾಲ್ಮೀಕಿ ಭಾಗವಹಿಸಿದ್ದರು. ನಂತರ ತಾಂತ್ರಿಕ ಗೋಷ್ಠಿಯಲ್ಲಿ ಶಕ್ತಿಬಿಂದು ಪ್ರದರ್ಶನದ ಮೂಲಕ ಡಾ| ರಘುನಾಥ ಆರ್. ಮಾಹಿತಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು.
ಕಿರಣ ನಾಯ್ಕ ಜೇನು ಕೃಷಿ ಪರಿಕರಗಳು ಮತ್ತು ತಳಿಗಳ ಕುರಿತು, ಬೆನಕ ಅಶೋಕ ನಾಯ್ಕ ವಾರ್ಷಿಕ ನಿರ್ವಾಹಣ ಮತ್ತು ವಿಭಜನೆ ಕುರಿತು, ಕಾಶಿನಾಥ ಪಾಟೀಲ್ ಜೇನು ಸಂಸ್ಕರಣೆ ಮತ್ತು ಮೌಲ್ಯವರ್ದನೆ ಕುರಿತು, ಮಾಹಾಬಲೇಶ್ವರ ಬಿಎಸ್ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಮಂಜುನಾಥ ಬಂಗಾರ್ಯ ನಾಯ್ಕ ಕಡಕೇರಿ ಜೇನು ಸಸ್ಯ ಪ್ರಭೇದಗಳ ಕುರಿತು ಅನುಭವ ಹಂಚಿಕೊಂಡರು. ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಬಸಪ್ಪಾ ತಿಪ್ಪಣ್ಣಾ ಬಂಡಿ, ರವಿ ವಿ. ಸೋಮಕ್ಕನವರ, ಸಿಬ್ಬಂದಿ ತೇಜಸ್ವೀ ನಾಯ್ಕ, ಸೋಮಶೇಖರ ನಾಯ್ಕ ಮತ್ತು ಸುರೇಂದ್ರ ಗೌಡ ಸಹಕಾರ ನೀಡಿದರು.