Advertisement

ಡ್ರಾಪ್‌ ರೋಬಾಲ್‌ನಲ್ಲಿ ಮಿಂಚುತ್ತಿರುವ ಪೋರ

10:23 AM Feb 03, 2019 | Team Udayavani |

ಸಿದ್ದಾಪುರ: ಇಂದಿನ ಮಕ್ಕಳು, ಯುವಕರು ಗಂಟೆಗಟ್ಟಲೇ ಫೋನ್‌ ಹಿಡಿದುಕೊಂಡೇ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಆಟ ಆಡೋದಕ್ಕಾಗಿ ಮೈದಾನಕ್ಕೆ ಹೋಗುವುದೇ ಅಪರೂಪ ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಇಲ್ಲೊಬ್ಬ ಪೋರ ಆಡೋದಕ್ಕೆ ಮೈದಾನ ಇಲ್ಲದಿದ್ದರೂ ರಸ್ತೆ ಮೇಲೆಯೇ ಕ್ರೀಡಾಭ್ಯಾಸ ಮಾಡುತ್ತಾನೆ. ವಾರ್ಮ್ ಅಪ್‌ಗಾಗಿ ಹೊಲಗದ್ದೆಗಳನ್ನೇ ಆಶ್ರಯಿಸಿದ್ದಾನೆ. ಗುರುವಿಲ್ಲದೇ ಗುರಿ ಮುಟ್ಟಿದ ಪೋರ ಸದ್ಯ ‘ಡ್ರಾಪ್‌ ರೋಬಾಲ್‌’ ಆಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾನೆ.

Advertisement

ಹೌದು. ಕಾರಟಗಿ ನ್ಯಾಷನಲ್‌ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ, ಉಳೇನೂರು ಗ್ರಾಮದ ಬಸವರಾಜ ಮೈಲಾಪುರ ಎಂಬ ಬಾಲಕ ಡ್ರಾಪ್‌ ರೋಬಾಲ್‌ ಆಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾನೆ. ಹಲವಾರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ.

ಹೈ ಜಂಪ್‌, ಲಾಂಗ್‌ ಜಂಪ್‌, ವಾಲಿಬಾಲ್‌, ಖೋಖೋ, ಥ್ರೋ ಬಾಲ್‌, ಓಟ ಹೀಗೆ ಹಲವು ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾನೆ. ಹೊಬಳಿಯಿಂದ ರಾಷ್ಟ್ರಮಟ್ಟದವರೆಗೂ ಹೆಸರು ಮಾಡಿದ ಬಸವರಾಜ ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ಡ್ರಾಪ್‌ ರೋಬಾಲ್‌ನಲ್ಲಿ ಬ್ರಾಂಚ್ ಮೆಡಲ್‌ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಮಹಾರಾಷ್ಟ್ರದಲ್ಲಿ ತೋರಿಸ ಅತ್ಯುತ್ತಮ ಪ್ರದರ್ಶನದಿಂದಾಗಿ ಬಸವರಾಜ ಶ್ರೀಲಂಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಬಸವರಾಜ ರಸ್ತೆಯ ಪಕ್ಕದಲ್ಲಿರುವ ಹುಣಸೆಮರಕ್ಕೆ ಖಾಲಿ ಬಾಟಲಿ ಕಟ್ಟಿ ಕಿಕ್‌ ಬ್ಯಾಕ್‌ ಅಭ್ಯಾಸ ಮಾಡುತ್ತಾನೆ. ಮನೆಯಂಗಳವನ್ನೇ ಮೈದಾನ ಮಾಡಿಕೊಂಡು ಆಟದ ತಯಾರಿ ನಡೆಸುತ್ತಾನೆ. ಇನ್ನೂ ಈತನಿಗೆ ಗುರು(ತರಬೇತುದಾರ)ಯಾರೂ ಇಲ್ಲ. ಮನೆಯಲ್ಲಿರುವ ಸಹೋದರರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಬಗ್ಗೆ ಮೊದಲು ಹೇಳಿಕೊಟ್ಟಿದ್ದರಂತೆ ಅಷ್ಟೇ. ನಂತರ ಅವರು ಹೇಳಿಕೊಟ್ಟಿದ್ದನ್ನೇ ಚಾಚು ತಪ್ಪದೆ ಅಭ್ಯಾಸ ಮಾಡಿ ಇಂದು ಶಾಲಾ ಮಟ್ಟದ ಕ್ರೀಡೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾನೆ. ಅದರಲ್ಲಿ ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಂಪ್‌ ರೋಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ನೂತನ ತಾಲೂಕು ಕಾರಟಗಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಡ್ರಾಪ್‌ ರೂಬಾಲ್‌ ಕ್ರೀಡೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದಾನೆ. ಇನ್ನೂ ಈ ಪೋರನ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಮಗ ದೇಶದ ಪರವಾಗಿ ಬೇರೆ ದೇಶದ ವಿರುದ್ಧ ಗೆದ್ದು ಬರಬೇಕೆಂದು ಹಾರೈಸಿದ್ದಾರೆ. ಶ್ರೀಲಂಕಾದಲ್ಲಿ ನಡೆಯುವ ಅಂತಾಷ್ಟ್ರೀಯ ಜ್ಯೂ. ಚಾಂಪಿಯನ್‌ ಶಿಪ್‌ಗೆ ತಯಾರಿ ನಡೆಸಲು ಬಸವರಾಜನಿಗೆ ಇನ್ನೂ ಉತ್ತಮ ತರಬೇತಿಯ ಅಗತ್ಯವಿದೆ. ಅದಕ್ಕಾಗಿ ಪಕ್ಕದ ಬಳ್ಳಾರಿಯ ಜೀಂದಾಲ್‌ನ ಶಾಲೆಯಲ್ಲಿ ತಮ್ಮ ಮಗನಿಗೆ ನೀಡಲು ಒಂದು ಅವಕಾಶ ಮಾಡಿಕೊಡಬೇಕು ಎಂದು ಬಸವರಾಜನ ತಂದೆ ಸಿದ್ಧಪ್ಪ ವಿನಂತಿ ಮಾಡಿಕೊಂಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿರುವ ಬಸವರಾಜಗೆ ಉತ್ತಮ ತರಬೇತಿ ಸಿಗಲಿ. ಶ್ರೀಲಂಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಭಾರತದ ಪತಾಕಿ ಹಾರಿಸಲಿ ಎನ್ನುವುದೇ ಎಲ್ಲರ ಆಶಯ.

ಸಿದ್ದನಗೌಡ ಹೊಸಮನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next