Advertisement

“ಅಮೃತ ಸ್ವರೂಪ ನೀರು ಜೀವ ಸಂಕುಲಕ್ಕೆ ಆಧಾರ’

11:50 PM Feb 26, 2020 | Sriram |

ಸಿದ್ದಾಪುರ: ಜಲವಿಲ್ಲದ ಜಾಗವಿಲ್ಲ. ಜೀವ ಜಲವಾಗಿರುವ ನೀರು ಪ್ರಕೃತಿಯು ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳಿಗೆ ಇತ್ತ ವರ. ಇದು ಸೃಷ್ಟಿಸಲಾದ ನೈಸರ್ಗಿಕ ಸಂಪತ್ತು. ನೀರಿಗೆ ನೀರೇ ಪರ್ಯಾಯ. ಮಳೆ ಇದಕ್ಕೆ ಮೂಲಾಧಾರ. ಅಮೃತ ಸ್ವರೂಪವಾದ ನೀರು ಜೀವ ಸಂಕುಲಕ್ಕೆ ಆಧಾರ ಎಂದು ಹಿರಿಯ ಭೂವಿಜ್ಞಾನಿ ಡಾ| ಎಂ. ದಿನಕರ ಶೆಟ್ಟಿ ಅವರು ಹೇಳಿದರು.

Advertisement

ಅವರು ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಂತರ್ಜಲ ಕಚೇರಿ ಉಡುಪಿ ಇವರ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಸಿದ್ದಾಪುರ ಇವರ ಸಹಕಾರದೊಂದಿಗೆ ಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಅಂತರ್ಜಲ ವಿದ್ಯಾರ್ಥಿ ಜಾಗೃತಿ ಶಿಬಿರ ಹಾಗೂ ಜಾಗೃತಿ ಜಾಥಾದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾರ್ವತ್ರಿಕ ದ್ರಾವಣವಾದ ನೀರು ಘನ, ದ್ರವ ಮತ್ತು ಅನಿಲ ರೂಪದಲ್ಲಿದೆ. ಜಲಚಕ್ರದ ಮುಖೇನ ಭೂಮೇಲ್ಮೆ ೃನ ನೀರು ಸೂರ್ಯನ ಶಾಖದಿಂದ ಆವಿಯಾಗಿ, ಮೋಡವಾಗಿ ಮೋಡದಿಂದ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿಯಿಂದ ಸುಮಾರು ಶೇ. 10 ಮಳೆಯ ನೀರು ಭೂಮಿಯಲ್ಲಿ ಇಂಗಿ ಮಣ್ಣಿನ ಪದರಗಳ ಮೂಲಕ ಭೂಮಿಯ ಒಳಗೆ ಜಿನಿಗುತ್ತದೆ. ಇದಕ್ಕೆ ಅಂತರ್ಜಲ ಎನ್ನುತ್ತಾರೆ. ಒಂದು ಪ್ರದೇಶದ ಅಂತರ್ಜಲದ ಲಭ್ಯತೆ ಹಾಗೂ ಪ್ರಮಾಣವು ಆ ಪ್ರದೇಶದ ಮಳೆ, ವಾತಾವರಣ ಮತ್ತು ಶಿಲಾ ರಚನೆಯ ಮೇಲೆ ಆವಲಂಬಿತವಾಗಿರುತ್ತವೆ ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತಿದಾರ ರತ್ನಶ್ರೀ ಜೋಸೆಫ್‌ ಜಿ.ಎಂ. ರೆಬೆಲ್ಲೋ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿ ಮಾತನಾಡಿ, ನೀರು ಜೀವಜಲ. ಸಕಲ ಜೀವರಾಶಿಗಳಿಗೂ ಜಲವೇ ಮೂಲ. ಇದು ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಇದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಜಿ.ಪಂ. ಸದಸ್ಯ ರೋಹಿತ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ತಾಲೂಕು ಪಂಚಾಯತ್‌ ಸದಸ್ಯ ಎಸ್‌.ಕೆ. ವಾಸುದೇವ ಪೈ ಕಿರು ಹೊತ್ತಗೆ ಬಿಡುಗಡೆ ಮಾಡಿದರು.

Advertisement

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಅಂತರ್ಜಲ ವಿದ್ಯಾರ್ಥಿ ಜಾಗೃತಿ ಶಿಬಿರ ಜಾಥಾವು ಸಿದ್ದಾಪುರ ಸರಕಾರಿ ಪ್ರೌಢಶಾಲೆಯಿಂದ ಹೊರಟು, ಸಿದ್ದಾಪುರ ಪೇಟೆ ಮೂಲಕ ಸಾಗಿ ಪ್ರೌಢಶಾಲೆಯಲ್ಲಿ ಸಮಾಪ್ತಿಗೊಂಡಿತು. ಜಾಗೃತಿ ಜಾಥದಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು ಹಾಗೂ ಸಿಬಂದಿ, ವಿದ್ಯಾರ್ಥಿಗಳು, ಹೆತ್ತವರು ಭಾಗವಹಿಸಿದರು. ಜಾಗೃತಿ ಶಿಬಿರದ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಶಿಕ್ಷಕ ಶೈಲೇಂದ್ರನಾಥ್‌ ಕೆ.ಎನ್‌. ಸ್ವಾಗತಿಸಿದರು. ಹಿರಿಯ ಭೂವಿಜ್ಞಾನಿ ಡಾ| ಎಂ. ದಿನಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಣ ಸಂಯೋಜಕ ಉದಯ ಗಾಂವ್ಕರ್‌ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸನತ್‌ ಶೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು. ಶಿಕ್ಷಕ ರಮಾನಂದ ನಾಯ್ಕ ವಂದಿಸಿದರು.

ಓಡುವ ನೀರನ್ನು ಇಂಗುವಂತೆ ಮಾಡಿ
ಮಳೆ ಕಡಿಮೆಯಾದ ಹಾಗೆಯೇ ನೀರಿನ ಪ್ರಮಾಣ ಕೂಡ ಕಡಿಮೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ನೀರು ಧಾರಾಳವಾಗಿ ಸಿಗುತ್ತಿತ್ತು. ಆಧುನಿಕತೆ ಮುಂದುವರಿದಂತೆ ಕಾಡುಗಳು, ಗುಡ್ಡ-ಬೆಟ್ಟಗಳನ್ನು ನಾಶಗೊಳಿಸಿದ ಪರಿಣಾಮ ಮಳೆ ಕಡಿಮೆಯಾಗುತ್ತಿದೆ. ಮಳೆ ಬಂದರೂ ನೀರು ಇಂಗುತ್ತಿಲ್ಲ. ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಮಣ್ಣು ಹೊಂದಿಲ್ಲ. ಸರಾಗವಾಗಿ ಓಡುವ ನೀರಿಗೆ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿದೆ. ಅಮೃತ ಸ್ವರೂಪವಾದ ನೀರಿನ ಬಳಕೆಯಲ್ಲಿಯೂ ಮಿತಿ ಅತ್ಯಗತ್ಯವಾಗಿದೆ.
-ಡಾ| ಎಂ. ದಿನಕರ ಶೆಟ್ಟಿ, ಹಿರಿಯ ಭೂವಿಜ್ಞಾನಿ

ನೀರನ್ನು ಸಂರಕ್ಷಿಸಿ
ನೀರು ಇರದಿದ್ದರೆ ಜೀವ ಜಗತ್ತು ಇರಲು ಸಾಧ್ಯವಿರುತ್ತಿರಲಿಲ್ಲ. ಭೂಮಿಯ ಮುಕ್ಕಾಲು ಪಾಲು ನೀರಿನಿಂದ ಆವರಿಸಲ್ಪಟ್ಟಿದೆ. ಭೂಮಿಯಲ್ಲಿರುವ ಎಲ್ಲ ನೀರು ಕುಡಿಯಲು ಯೋಗ್ಯವಾಗಿಲ್ಲ. ಭೂಮಿಯಲ್ಲಿ ದೊರಕುವ ಒಟ್ಟು ಶೇ.97 ಭಾಗ ಸಮುದ್ರದಲ್ಲಿದೆ. ಆದರೆ ಅದು ಉಪ್ಪು ನೀರು. 3 ಶೇ. ಮಾತ್ರ ಸಿಹಿ ತೀರು. ಇದು ಧ್ರುವ ಪ್ರದೇಶದಲ್ಲಿ ಮಂಜಿನ ರೂಪದಲ್ಲಿ ಭೂಮಿಯ ಒಳಗೆ ಅಂತರ್ಜಲ ವಾಗಿ ವಾತಾವರಣದಲ್ಲಿ ಆವಿಯ ರೂಪದಲ್ಲಿ ಹಾಗೂ ಭೂಮಿಯ ಮೇಲ್ಭಾಗದಲ್ಲಿ ಕೆರೆ. ಕೊಳ, ತೊರೆ, ನದಿ, ಸರೋವರಗಳಲ್ಲಿ ದ್ರವ ರೂಪದಲ್ಲಿ ಹಂಚಿಹೋಗಿದೆ. ನೀರನ್ನು ಸಂರಕ್ಷಿಸದಿದ್ದಲ್ಲಿ ಮನುಕುಲ ನಾಶವಾಗುತ್ತದೆ.
-ರತ್ನಶ್ರೀ ಜೋಸೆಫ್‌ ಜಿ.ಎಂ. ರೆಬೆಲ್ಲೋ

Advertisement

Udayavani is now on Telegram. Click here to join our channel and stay updated with the latest news.

Next