Advertisement
ಪ್ರತಿದಿನ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಾಹನ ಓಡಾಟ ಇರುವ ಸಿದ್ದಾಪುರ ಪೇಟೆಗೆ ಸುಸಜ್ಜಿತ ಸರ್ಕಲ್ ಅತ್ಯಗತ್ಯ. ಸರ್ಕಲ್ ನಿರ್ಮಾಣಕ್ಕಾಗಿ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಹಾಗೂ ಇಲಾಖೆಯಿಂದ ಹಿಡಿದು ಮುಖ್ಯಮಂತ್ರಿಯ ತನಕ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಸರ್ಕಲ್‌ನಲ್ಲಿ ನಾನಾ ಭಾಗಗಳಿಗೆ ಹೋಗುವ ಶಾಲಾ ಕಾಲೇಜು ವಾಹನಗಳು, ನಿತ್ಯ ಕಚೇರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳುವ ವಾಹನ ಸವಾರರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ಸಂದರ್ಭ ಜನಜಂಗುಳಿಯೂ ಇರುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಅನಾಹುತ ನಡೆಯುವ ಸಾಧ್ಯತೆ ಇದೆ. ಈಗಿರುವ ಸರ್ಕಲ್ ಚಿಕ್ಕದಾಗಿದ್ದು, ಸಿ.ಸಿ. ಕೆಮೆರಾ ಹೊರತುಪಡಿಸಿ ಸಿಗ್ನಲ್ ಜತೆಗೆ ಯಾವುದೇ ದೊಡ್ಡ ಮಟ್ಟದ ನಾಮಫಲಕ ಇಲ್ಲದಿರುವುದರಿಂದ ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಇರುವ ಸಣ್ಣ ಸರ್ಕಲ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ.
Related Articles
ಸಿದ್ದಾಪುರದಲ್ಲಿ ಒಂದು ಸುಸಜ್ಜಿತವಾದ ಸರ್ಕಲ್ ನಿರ್ಮಾಣವಾಗಬೇಕೆಂದು ಸಿದ್ದಾಪುರ, ಉಳ್ಳೂರು-74, ಶಂಕರನಾರಾಯಣ, ಹೊಸಂಗಡಿ, ಯಡಮೊಗೆ, ಆಜ್ರಿ, ಹಳ್ಳಿಹೊಳೆ, ಅಮಾಸೆಬೈಲು, ಅಂಪಾರು ಪಂಚಾಯತ್‌ನವರು ಸಭೆಯಲ್ಲಿ ನಿರ್ಣಯ ಮಾಡಿ, ಈಗಾಗಲೇ ಜಿಲ್ಲಾ ಪಂಚಾಯತ್ ಮೂಲಕ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
Advertisement
ಜಯಕರ್ನಾಟಕ ಸಂಘಟನೆ ಸ್ಥಳೀಯ ಸಂಘಸಂಸ್ಥೆಗಳ ಹಾಗೂ ಸಿದ್ದಾಪುರ ಸುತ್ತಮುತ್ತಲಿನ ಗ್ರಾ.ಪಂ.ಗಳ ನಿರ್ಣಯ ಪ್ರತಿಗಳೊಂದಿಗೆ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಸರ್ಕಲ್ ನಿರ್ಮಾಣವಾಗದಿದ್ದಲ್ಲಿ ಸಂಘಟನೆಯ ಮೂಲಕ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಹೋರಾಟ ಸಮಿತಿ ರಚನೆಸುಗಮ ಸಂಚಾರಕ್ಕಾಗಿ ಸಿದ್ದಾಪುರದಲ್ಲಿ ಒಂದು ಸುಸಜ್ಜಿತವಾದ ಸರ್ಕಲ್ ನಿರ್ಮಾಣ ಮಾಡ ಬೇಕೆಂಬ ಸಾಮಾಜಿಕ ಕಾಳಜಿ ಹೊಂದಿರುವ ಸಿದ್ದಾಪುರ ನಾಗರಿಕರು ಸರ್ಕಲ್ ನಿರ್ಮಾಣ ಹೋರಾಟ ಸಮಿತಿಯನ್ನು ರಚಿಸಿಕೊಂಡು ನಿರಂತರ ಹೋರಾಟ ನಡೆಸುತ್ತಿದ್ದು, ಶೀಘ್ರ ಸ್ಪಂದನೆಯ ಆಶಾಭಾವನೆಯಲ್ಲಿದ್ದಾರೆ. ಇಲಾಖೆಗೆ ಮನವಿ
ಸಾರ್ವಜನಿಕ ಸುರಕ್ಷೆಗಾಗಿ ಸಿದ್ದಾಪುರದಲ್ಲಿ ಒಂದು ಸುಸಜ್ಜಿತವಾದ ಸರ್ಕಲ್ ನಿರ್ಮಾಣವಾಗಬೇಕು. ನಿರ್ಮಾಣದ ಬಗ್ಗೆ ಗ್ರಾ.ಪಂ. ನಿರ್ಣಯದೊಂದಿಗೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. ಇದರ ಬಗ್ಗೆ ಕ್ಷೇತ್ರ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಮುಖ್ಯಮಂತ್ರಿ ಹಾಗೂ ಸಂಸದರ ಜತೆಯಲ್ಲಿ ಚರ್ಚಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸರ್ಕಲ್ ನಿರ್ಮಾಣ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು.
-ರೋಹಿತ್‌ಕುಮಾರ ಶೆಟ್ಟಿ
ಸದಸ್ಯ ಜಿ.ಪಂ. ಸಿದ್ದಾಪುರ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ
ಸರ್ಕಲ್ ನಿರ್ಮಾಣದ ಬಗ್ಗೆ ಜನಪ್ರತಿನಿಧಿ ಗಳಿಂದ ಹಾಗೂ ಸಾರ್ವಜನಿಕ ಬೇಡಿಕೆಗಳು ಬಂದಿವೆ. ಈ ಕುರಿತು ಶಾಸಕರಿಗೆ ಹಾಗೂ ಇಲಾಖೆಯ ಮೇಲಧಿಕಾರಿಗಳಿಗೆ ಸಾರ್ವಜನಿಕರ ಪತ್ರ ಕಳುಹಿಸಲಾಗಿದೆ. ಸೂಕ್ತ ಉತ್ತರ ಬಂದ ಮೇಲೆ ಸುಸಜ್ಜಿತವಾದ ಸರ್ಕಲ್ ನಿರ್ಮಿಸುತ್ತೇವೆ.
-ದುರ್ಗಾದಾಸ್, ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಕುಂದಾಪುರ ವಿಭಾಗ ಉಗ್ರ ಹೋರಾಟ
ಸಿದ್ದಾಪುರ ಪೇಟೆಯ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಪರಿಣಾಮ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಸುರಕ್ಷತೆಯ ದೃಷ್ಟಿಯಲ್ಲಿ ಸಿದ್ದಾಪುರದಲ್ಲಿ ಸುಸಜ್ಜಿತವಾದ ಸರ್ಕಲ್ ನಿರ್ಮಾಣವಾಗಬೇಕು. ಸರ್ಕಲ್ ನಿರ್ಮಾಣವಾಗದಿದ್ದಲ್ಲಿ ಸಂಘಟನೆಯ ಮೂಲಕ ಉಗ್ರ ಹೋರಾಟ ಮಾಡಬೇಕಾಗುತ್ತದೆ.
-ಸುದರ್ಶನ ಶೆಟ್ಟಿ ಬಾಳೆಬೇರು, ಗೌರವಾಧ್ಯಕ್ಷರು, ಜಯ ಕರ್ನಾಟಕ ಸಂಘಟನೆ ಸಿದ್ದಾಪುರ ವಲಯ