Advertisement

ಸಿದ್ದಕಟ್ಟೆ  ಆರೋಗ್ಯ ಉಪಕೇಂದ್ರ: ಮೇಲ್ದರ್ಜೆ ಬೇಡಿಕೆ

11:10 AM Jul 01, 2018 | Team Udayavani |

ಪುಂಜಾಲಕಟ್ಟೆ: ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಸಿದ್ದಕಟ್ಟೆ ಬೆಳೆಯುತ್ತಿರುವ ಪೇಟೆಯಾಗಿದ್ದು, ಇಲ್ಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆ ಇದೆ. ಪ್ರಸ್ತುತ ಆರೋಗ್ಯ ಉಪ ಕೇಂದ್ರವಿದ್ದರೂ ಪೂರ್ಣ ಪ್ರಮಾಣದ ಸಿಬಂದಿ ಇಲ್ಲದೆ ಜನತೆ ಸೇವೆಯಿಂದ ವಂಚಿತಗೊಂಡಿದ್ದಾರೆ. ಬಂಟ್ವಾಳ-ಬೆಳ್ತಂಗಡಿ-ಮೂಡಬಿದಿರೆ ಮೂರು ತಾಲೂಕುಗಳ ಗಡಿಭಾಗದಲ್ಲಿರುವ ಈ ಗ್ರಾ.ಪಂ.ನ ಜನಸಂಖ್ಯೆಯೂ ಅಧಿಕವಿದೆ. ಆದುದರಿಂದ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವಶ್ಯಕತೆ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

Advertisement

ಕೆಲವು ದಿನ ಮಾತ್ರ ಸೇವೆ
ಗ್ರಾ.ಪಂ.ಗೆ ಸಂಬಂಧಪಟ್ಟಂತೆ ಪ್ರಾ. ಆರೋಗ್ಯ ಕೇಂದ್ರ ಇರುವುದು ರಾಯಿಯಲ್ಲಿ. ಈ ಕಾರಣಕ್ಕಾಗಿ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪಿಸಿ ಗ್ರಾಮದ ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿತ್ತು. ಆದರೆ ಇಲ್ಲಿ ಕರ್ತವ್ಯದಲ್ಲಿದ್ದ ಸಿಬಂದಿ ವರ್ಗಾವಣೆ ಬಳಿಕ ಪೂರ್ಣ ಪ್ರಮಾಣದ ಸಿಬಂದಿ ನೇಮಕಗೊಳ್ಳದೆ ವಾರದ ಕೆಲವು ದಿನ ಮಾತ್ರ ಆರೋಗ್ಯ ಕೇಂದ್ರ ಬಾಗಿಲು ತೆರೆದಿರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿ.ಪಂ. ವತಿಯಿಂದ ಉಪಕೇಂದ್ರಕ್ಕೆ ಸುಣ್ಣ-ಬಣ್ಣ ಬಳಿದು ದುರಸ್ತಿಗೊಳಿಸಲಾಗಿದೆ. ಈ ಹಿಂದೆ ಇಲ್ಲಿ ಕಿರಿಯ ಆರೋಗ್ಯ ಸಹಾಯಕಿಯೊಬ್ಬರು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ವರ್ಗಾವಣೆ ಬಳಿಕ ಸುಮಾರು ಮೂರು ವರ್ಷಗಳಿಂದ ಆರೋಗ್ಯ ಉಪಕೇಂದ್ರದಲ್ಲಿ ಪೂರ್ಣ ಪ್ರಮಾಣದ ಆರೋಗ್ಯ ಸಹಾಯಕಿಯ ನೇಮಕವಾಗಿಲ್ಲ. ಕರ್ಪೆ ಉಪ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಹೊರಿಸಲಾಗಿದ್ದು, ವಾರದ 3 ದಿನಗಳ ಕಾಲ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ತಿಳಿಸಿದ್ದಾರೆ.

ಮನವಿ ಸಲ್ಲಿಸಲು ಸಿದ್ಧತೆ
ಸಂಗಬೆಟ್ಟು ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ರೋಗ ಬಾಧಿಸದಿದ್ದರೂ ಪಕ್ಕದ ರಾಯಿಯಲ್ಲಿ ಈಗಾಗಲೇ ಅನೇಕ ಮಂದಿಗೆ ಶಂಕಿತ ಡೆಂಗ್ಯೂ ಬಾಧಿಸಿದೆ. ಗ್ರಾ. ಭಾಗಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆಯಾಗಿ ಸಿದ್ದಕಟ್ಟೆ
ಆರೋಗ್ಯ ಉಪ ಕೇಂದ್ರಕ್ಕೆ ಪೂರ್ಣ ಪ್ರಮಾಣದ ಸಿಬಂದಿಯನ್ನು ನೇಮಕಗೊಳಿಸಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬಂಟ್ವಾಳ ಶಾಸಕರಲ್ಲಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಸಹಾಯಕಿ ಹುದ್ದೆ ಖಾಲಿ
ಸಿದ್ದಕಟ್ಟೆ ಆರೋಗ್ಯ ಉಪಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇದೆ. ಗ್ರಾಮದ ಜನರಿಗೆ ತೊಂದರೆ ಆಗಬಾರದೆನ್ನುವ ನಿಟ್ಟಿನಲ್ಲಿ ಕರ್ಪೆ ಉಪಕೇಂದ್ರದ ಆರೋಗ್ಯ ಸಹಾಯಕಿಯನ್ನು ತಾತ್ಕಾಲಿಕವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚುಚ್ಚುಮದ್ದು ನೀಡಿಕೆ, ಕ್ಲಿನಿಕ್‌ಗಳನ್ನು ಸಿಬಂದಿ ನಡೆಸಿಕೊಂಡು ಬರುತ್ತಿದ್ದಾರೆ. ವರ್ಗಾವಣೆ ಅಥವಾ ಹೊಸ ನೇಮಕಾತಿ ಸಂದರ್ಭದಲ್ಲಿ ಖಾಯಂ ಸಿಬಂದಿ ನೇಮಕಾತಿಯಾಗುತ್ತದೆ.
– ಡಾ| ದೀಪಾ ಪ್ರಭು,
   ತಾ| ಆರೋಗ್ಯಾಧಿಕಾರಿ, ಬಂಟ್ವಾಳ

Advertisement

ಆರೋಗ್ಯ ಸೇವೆ ಸಿಗುತ್ತಿಲ್ಲ
ಪೂರ್ಣ ಪ್ರಮಾಣದ ಸಿಬಂದಿಯಿಲ್ಲದೆ ಗ್ರಾಮದ ಜನರಿಗೆ ಸರಿಯಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ. ಈಗ ಕರ್ತವ್ಯದಲ್ಲಿರುವ ಸಿಬಂದಿಗೆ ಕರ್ಪೆ ಗ್ರಾಮದ ಜತೆಗೆ ಹೆಚ್ಚುವರಿಯಾಗಿ ಸಂಗಬೆಟ್ಟು ಗ್ರಾಮವನ್ನು ನೋಡಿಕೊಳ್ಳಬೇಕಾಗಿದೆ. ಅಲ್ಲದೆ ವಾರಕ್ಕೊಮ್ಮೆಯಾದರೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಲ್ಲಿಗೆ ಭೇಟಿ ನೀಡಿದರೆ ಜನರಿಗೆ ಅನುಕೂಲವೆಂದು ಗ್ರಾಮಸ್ಥರೆಲ್ಲರ ಬೇಡಿಕೆ.
– ಪ್ರಭಾಕರ ಪ್ರಭು
ತಾ.ಪಂ. ಸದಸ್ಯರು

ರತ್ನದೇವ್‌ ಪುಂಜಾಲಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next