ಬೆಂಗಳೂರು: ಮಹಾದೇವನಲ್ಲಿ ಭಕ್ತಿ, ಮನುಷ್ಯರಲ್ಲಿ ಪ್ರೀತಿ, ಮಕ್ಕಳಲ್ಲಿ ವಾತ್ಸಲ್ಯ ಹೊಂದಿದ್ದ ಡಾ.ಶಿವಕುಮಾರ ಸ್ವಾಮೀಜಿ ಜೀವನ ಸಂತರಿಗೆ, ಮಠಾಧೀಶರಿಗೆ ಮಾದರಿಯಾಗಿತ್ತು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಕರವೇ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಗುರುವಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಸೇವಾಕಾರ್ಯವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ಎಂದರು.
ಶಿಕ್ಷಣ, ವಸತಿ ಮತ್ತು ದಾಸೋಹದ ಮೂಲಕ ಮಠಾಧೀಶರಿಗೆ ಮಾದರಿಯಾಗಿದ್ದಾರೆ. ಅವರು ಭೌತಿಕವಾಗಿ ನಮ್ಮ ಜತೆ ಇಲ್ಲದಿದ್ದರೂ, ಸೇವಾಕಾರ್ಯದ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ. ಇಷ್ಟಲಿಂಗದಲ್ಲಿ ಮಾತ್ರವಲ್ಲಿ ಮನುಷ್ಯನಲ್ಲೂ ಭಗವಂತನನ್ನು ಕಂಡಿದ್ದಾರೆ. ಅವರ ಕಾಲದಲ್ಲಿ ನಾವಿದ್ದೇವೆ ಎನ್ನುವುದೇ ಸಂತೋಷದ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅನ್ಯಾಯ ಮಾಡಿದ್ದೇವೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಿದ್ಧಗಂಗಾ ಮಠಾಧೀಶರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರು ಬದುಕಿದ್ದಾಗಲೇ ಭಾರತ ರತ್ನ ನೀಡಿದ್ದರೆ, ಪ್ರಶಸ್ತಿ ಮೌಲ್ಯ ಹೆಚ್ಚಾಗುತ್ತಿತ್ತು. ಅವರಿಗೆ ಭಾರತ ರತ್ನ ನೀಡದೆ ನಮಗೆ ನಾವೇ ಅನ್ಯಾಯ ಮಾಡಿದ್ದೇವೆ.
ಶ್ರೀಗಳು ಯಾವುದೇ ಪ್ರಶಸ್ತಿಗಳನ್ನು ಕೂಡ ಬಯಸಿದವರಲ್ಲ. ಅವರ ತ್ರಿವಿಧ ದಾಸೋಹದ ಸೇವೆಗಾಗಿ ಭಾರತ ರತ್ನ ನೀಡುವಂತೆ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಕೇಂದ್ರ ಸರ್ಕಾರ ನೀಡುವ ಮನಸ್ಸು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗೃಹ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಮದರ್ ತೆರೆಸಾ ಅವರು ಶಾಂತಿ ಮತ್ತು ಸೇವೆಯನ್ನು ಪರಿಗಣಿಸಿ ನೊಬೆಲ್ ಪಾರಿತೋಷಕ ನೀಡಲಾಗಿದೆ. ಶ್ರೀಗಳಿಗೆ ಕೂಡ ನೊಬೆಲ್ ಪ್ರಶಸ್ತಿ ನೀಡುವಂತೆ ಒತ್ತಾಯಿಸಲಾಗುವುದುಎಂದು ಹೇಳಿದರು.
ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿದರು. ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಕರಿಬಸವ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಅಥಣಿಯ ಮೊಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮೇಯರ್ ಗಂಗಾಂಬಿಕಾ, ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಕುಂ. ವೀರಭದ್ರಪ್ಪ ಇತರರಿದ್ದರು.