ತರೀಕೆರೆ: ಸಿದ್ದಗಂಗಾ ಮಠದ ಶ್ರೀ ಡಾ| ಸಿದ್ದಗಂಗಾ ಸ್ವಾಮಿಗಳ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಭಗವಾನ್ ಹೇಳಿದರು. ಅವರು ಪ್ರವಾಸಿ ಮಂದಿರದಲ್ಲಿ ಕಸಾಪವತಿಯಿಂದ ಏರ್ಪಡಿಸಿದ್ದ ಶ್ರೀಗಳ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಶಿವಕುಮಾರ ಸ್ವಾಮೀಜಿಗಳು 21ನೇ ಶತಮಾನ ಕಂಡ ಸಂತ. ಲಕ್ಷಾಂತರ ಮಕ್ಕಳಿಗೆ ಅಕ್ಷರ ಅನ್ನದಾಸೋಹ ನೀಡಿ ಅವರ ಬದುಕಿಗೆ ನೆರವಾದವರು. ಅವರನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದರು.
ಶ್ರೀ ಸಿದ್ದಗಂಗಾ ಸ್ವಾಮಿಗಳು ಜಾತಿ ಮತವನ್ನು ಮೀರಿ ಬೆಳದವರು. ಅಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಇಂದಿನ ಸಮಾಜದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ. ಅವರು ನಿತ್ಯ ಸ್ಮರಣೀಯರು ಎಂದು ಪುರಸಭೆಯ ಮಾಜಿ ಉಪಾಧ್ಯಕ್ಷ ಟಿ.ಆರ್.ಆಶೋಕ ಹೇಳಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಚಂದ್ರಪ್ಪ ಮಾತನಾಡಿ, ಶ್ರೀಗಳು ನುಡಿದಂತೆ ನಡೆದವರು, ಶರಣ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದವರು, ಅವರೋರ್ವ ಪುಣ್ಯ ಪುರಷರು ಎಂದರು.
ಭಕ್ತನಕಟ್ಟೆ ಗ್ರಾಮದ ಲೋಕೇಶ್ ಅವರ ತಂಡ ವಚನ ಗಾಯನ ಮಾಡಿದರು. ಟಿ.ಎಸ್.ಮೋಹನ್‌ಕುಮಾರ್, ನವೀನ್‌ಕುಮಾರ್, ಇಮ್ರಾನ್ ಅಹಮದ್‌ಬೇಗ್, ವಿ.ಪ್ರಶಾಂತ್, ಟಿ.ಎಂ.ದೇವಾನಂದ ಮತ್ತು ಅನಂತನಾಡಿಗ್ ಇದ್ದರು.