Advertisement

ಆಸ್ಪತ್ರೆಯಿಂದ ಮಠಕ್ಕೆ ತೆರಳಿದ ಸಿದ್ಧಗಂಗಾ ಶ್ರೀ

10:19 AM Sep 23, 2017 | Team Udayavani |

ತುಮಕೂರು/ಬೆಂಗಳೂರು: ಅನಾರೋಗ್ಯದ ಕಾರಣ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾ ಮಠದ ಶಿವಕುಮಾರ  ಸ್ವಾಮೀಜಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಮಠಕ್ಕೆ ತೆರಳಿದರು.

Advertisement

ಶೀತ, ಜ್ವರ, ಕಫ‌ ಹಾಗೂ ಪಿತ್ತನಾಳ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾ ಶ್ರೀಗಳಿಗೆ ಸ್ಟಂಟ್‌ ಅಳವಡಿಸಿ ಚಿಕಿತ್ಸೆ ನೀಡಿದ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಶ್ರೀಗಳ ಜತೆ ಆಸ್ಪತ್ರೆಯ ಮೂವರು ವೈದ್ಯರ  ತಂಡವನ್ನೂ ಮಠಕ್ಕೆ ಕಳುಹಿಸಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ನಿತ್ಯ ಎರಡು ಬಾರಿ ತಪಾಸಣೆ ಸಹ ನಡೆಸಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಗುರುವಾರ ರಾತ್ರಿಯೇ ಶ್ರೀಗಳು ಮಠಕ್ಕೆ ತೆರಳಲು ಮುಂದಾಗಿದ್ದರು. ಆದರೆ, ವೈದ್ಯರು ಶುಕ್ರವಾರ ಬೆಳಗಿನವರೆಗೂ ಆಸ್ಪತ್ರೆಯಲ್ಲೇ
ವಿಶ್ರಾಂತಿ ಪಡೆಯುವಂತೆ ಮನವಿ ಮಾಡಿದ್ದರು. ಹೀಗಾಗಿ, ಶುಕ್ರವಾರ ಬೆಳಗ್ಗೆ ಶ್ರೀಗಳು ಆಸ್ಪತ್ರೆಯಲ್ಲೇ ಪೂಜೆ ಮುಗಿಸಿ ಪ್ರಸಾದ ಸೇವಿಸಿ ನಂತರ ದಿನಪತ್ರಿಕೆಗಳನ್ನು ಓದಿ ಅಲ್ಲಿಂದ ಮಠಕ್ಕೆ ತೆರಳಿದರು. ನಂತರ ಎಂದಿನಂತೆ ಮಠದಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. 

ಭಕ್ತರ ದಂಡು: ಬೆಂಗಳೂರಿನಿಂದ ನೇರವಾಗಿ ಸಿದ್ಧಗಂಗಾ ಕ್ಷೇತ್ರದ ಹಳೆಯ ಮಠಕ್ಕೆ ಆಗಮಿಸಿದ ಶ್ರೀಗಳು ವ್ಹೀಲ್‌ ಚೇರ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದರು. ನಡೆದುಕೊಂಡೆ ಹಳೆಯ ಮಠದ ಕೊಠಡಿ ಪ್ರವೇಶಿಸಿದರು. ಲವಲವಿಕೆಯಿಂದಲೇ ಶ್ರೀಗಳು ಮಠದ
ಮೆಟ್ಟಿಲುಗಳನ್ನು ಹತ್ತಿ ನಡೆದುಕೊಂಡು ಹೋದರು. ಅವರಿಗೆ ಡಾ.ಎಸ್‌. ಪರಮೇಶ್‌ ಮತ್ತಿತರರು ಸಹಕರಿಸಿದರು.

ವೈದ್ಯರ ತಪಾಸಣೆಯ ನಂತರ ಭಕ್ತರನ್ನು ನೋಡುವ ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.
ದರ್ಶನಕ್ಕಾಗಿ ಸಾವಿರಾರು ಭಕ್ತರು ಬಂದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶ್ರೀಗಳಿಗೆ ಒಂದು ವಾರ
ಕಾಲ ವಿಶ್ರಾಂತಿ ಬೇಕಿದೆ. ಯಾವುದೇ ಸೋಂಕು ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವಾರ ಶ್ರೀಗಳ ದರ್ಶನ ಭಕ್ತರಿಗೆ ದೊರೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next